ದಲಿತರೇನು ಪಾಪಿಗಳೇ? ದಲಿತರ ಮನೆಯಲ್ಲಿ ವಾಸ್ತವ್ಯ ಮಾಡಿದ ಬಿಜೆಪಿ ಮುಖಂಡರಿಗೆ ಖರ್ಗೆ ಪ್ರಶ್ನೆ

Update: 2018-02-14 13:12 GMT

ಕಲಬುರ್ಗಿ, ಫೆ. 14: ದಲಿತರನ್ನು ಅಸ್ಪೃಶ್ಯತೆಯಲ್ಲಿ ಇಟ್ಟವರೇ ಬಿಜೆಪಿ ಮತ್ತು ಆರೆಸೆಸ್ಸ್‌ನವರು. ಮನುಸ್ಮೃತಿ ಮತ್ತು ಬಿಜೆಪಿಯ ದಲಿತ ವಿರೋಧಿ ನೀತಿಯಿಂದ ದಲಿತರು ಇಂದಿಗೂ ಬವಣೆಪಡುವ ದುಃಸ್ಥಿತಿ ಬಂದಿದೆ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಪ್ರತಿ ಬಾರಿ ದಲಿತರ ಮನೆಯಲ್ಲಿ ಊಟ ಮಾಡಿದೆವು, ಉಪಾಹಾರ ಸೇವಿಸಿದೆವು, ದಲಿತರ ಮನೆಯಲ್ಲಿ ವಾಸ್ತವ್ಯ ಮಾಡಿದೆವು ಎಂದು ಹೇಳುತ್ತಾರೆ. ಹಾಗಾದರೆ ದಲಿತರೇನು ಪಾಪಿಗಳೇ ಎಂದು ಪ್ರಶ್ನಿಸಿದರು.

ಬಿಜೆಪಿಯವರು ದಲಿತರ ಮನೆಯಲ್ಲಿ ಊಟ ಮಾಡುವುದೇ ಸಾಧನೆ ಎಂಬಂತೆ ಬಿಂಬಿಸುತ್ತಿದ್ದಾರೆ. ದಲಿತರೇನು ವಿಷ ಉಣ್ಣಿಸುತ್ತಾರಾ? ಎಲ್ಲರೂ ಊಟ ಮಾಡುವುದನ್ನೇ ಅವರೂ ಮಾಡುತ್ತಾರೆ, ಅದನ್ನೇ ಬಡಿಸುತ್ತಾರೆ. ಅವರ ಮೈಯಲ್ಲೂ ಕೆಂಪು ರಕ್ತವೇ ಹರಿಯುತ್ತಿದೆ ಎಂದ ಅವರು ಹೇಳಿದರು. ನಾನು ಕೊಳೆಗೇರಿಯಿಂದಲೇ ಈ ಮಟ್ಟಕ್ಕೆ ಬೆಳೆದಿದ್ದೇನೆ. ಆದರೆ, ಬಿಜೆಪಿಯವರು ಜಾತ್ರೆಯಲ್ಲಿ ಒಂದು ದಿನ ತೇರು ಎಳೆದು ನಾವೇ ಎಳೆದೆವು, ನಾವೇ ಎಳೆದೆವು ಎಂದು ಹೇಳುತ್ತಾರೆ ಎಂದು ಲೇವಡಿ ಮಾಡಿದ ಖರ್ಗೆ, ದಲಿತರ ಮನೆಯಲ್ಲಿ ಊಟ, ವಾಸ್ತವ್ಯ ಮಾಡುವುದರಿಂದ ಅವರ ಬದುಕು ಬದಲಾಗುವುದಿಲ್ಲ ಎಂದು ಹೇಳಿದರು.

ಸುಳ್ಳು ಹೇಳುವುದರಲ್ಲಿ ನಿಸ್ಸೀಮರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಾಟಿ ಕೋಳಿ ಊಟ ಮಾಡಿದ್ದಾರೆಂಬ ಯಡಿಯೂರಪ್ಪನವರ ಆರೋಪ ಸತ್ಯಕ್ಕೆ ದೂರ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಏನಾದರೊಂದು ಆರೋಪ ಮಾಡಬೇಕೆಂದು ಹೀಗೆ ಹೇಳುತ್ತಿದ್ದಾರೆ ಎಂದು ಟೀಕಿಸಿದರು.

‘ಅಕ್ರಮ ಆಸ್ತಿ ಹೊಂದಿದ್ದೇನೆಂದು ಚುನಾವಣೆ ಸಮಯದಲ್ಲಿ ಬಿಜೆಪಿ ಮುಖಂಡರು ನನ್ನ ವಿರುದ್ಧ ಸುಳ್ಳು ಆರೋಪ ಮಾಡುವ ಮೂಲಕ ನನ್ನ ಹೆಸರಿಗೆ ಕಳಂಕ ತರಲಾಗುತ್ತಿದೆ. ಆದರೆ, ನನ್ನ ಬದುಕು ತೆರೆದ ಪುಸ್ತಕವಿದ್ದಂತೆ. ಈ ಹಿಂದೆಯೂ ಈ ರೀತಿಯ ಆರೋಪ ಮಾಡಲಾಗಿತ್ತು. ಅದು ಮುಗಿದು ಹೋಗಿದೆ. ಇದನ್ನು ಜನ ನಂಬುವುದಿಲ್ಲ, ಪರಿಣಾಮವೂ ಬೀರುವುದಿಲ್ಲ’

-ಮಲ್ಲಿಕಾರ್ಜುನ ಖರ್ಗೆ,  ಲೋಕಸಭೆ ಕಾಂಗ್ರೆಸ್ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News