ಬೆಂಗಳೂರು: ಮೋಹನ್ ಭಾಗವತ್ ಗಡಿಪಾರಿಗೆ ಆಗ್ರಹಿಸಿ ಧರಣಿ

Update: 2018-02-14 14:15 GMT

ಬೆಂಗಳೂರು, ಫೆ. 14: ದೇಶದ ಯೋಧರನ್ನೇ ಅವಹೇಳನ ಮಾಡುವ ರೀತಿಯ ಹೇಳಿಕೆ ನೀಡಿದ ಆರೆಸೆಸ್ಸ್ ಮುಖ್ಯಸ್ಥ ಮೋಹನ್ ಭಾಗವತ್ ನಿಜವಾದ ‘ದೇಶದ್ರೋಹಿ’, ಅವರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕೆಪಿಸಿಸಿಯ ಮಾಹಿತಿ ತಂತ್ರಜ್ಞಾನ ವಿಭಾಗದ ಕಾರ್ಯಕರ್ತರು ಪ್ರತಿಕೃತಿದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ಇಲ್ಲಿನ ಮೌರ್ಯ ವೃತ್ತದಲ್ಲಿ ರಾಜಾಜಿನಗರ ಕ್ಷೇತ್ರದ ಕಾಂಗ್ರೆಸ್ ಸಮಿತಿ ಮಾಹಿತಿ ತಂತ್ರಜ್ಞಾನ ವಿಭಾಗದ ಅಧ್ಯಕ್ಷ ವಿ.ಶೇಖರ್ ನೇತೃತ್ವದಲ್ಲಿ ಧರಣಿ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಮೋಹನ್ ಭಾಗವತ್ ಹಾಗೂ ಆರೆಸೆಸ್ಸ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ದೇಶದ ಗಡಿಯಲ್ಲಿ ದಿನದ 24 ಗಂಟೆಗಳ ಕಾಲ ಜೀವದ ಹಂಗನ್ನು ತೊರೆದು ದೇಶ ಕಾಯುತ್ತಿರುವ ಸೇನೆಯನ್ನು ಅವಮಾನಿಸಿದ ಮೋಹನ್ ಭಾಗವತ್ ನಿಜವಾದ ದೇಶದ್ರೋಹಿ. ಆತನ ಹೇಳಿಕೆಯನ್ನು ದೇಶದ ಎಲ್ಲ ನಾಗರಿಕರು ಖಂಡಿಸಬೇಕು ಎಂದು ಮುಖಂಡರು ಹೇಳಿದರು.

ಬಿಜೆಪಿಯ ನಾಯಕರು ಹಾಗೂ ಪ್ರಧಾನಿ ಮೋದಿ ಈ ಹೇಳಿಕೆಗೆ ಯಾವ ರೀತಿ ಕ್ರಮ ಕೈಗೊಳ್ಳಲಿದ್ದಾರೆಂಬುದು ದೇಶದ ಜನತೆಗೆ ತಿಳಿಯಬೇಕು. ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ದಾಳಿ ನಡೆಸಿದ್ದು ಯಾರು ಎಂಬುದನ್ನು ಪ್ರಧಾನಿ ಮೋದಿ ಕೂಡಲೇ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

ದೇಶಕ್ಕಾಗಿ ಸಂಘ ಪರಿವಾರದವರು ಯಾವ ತ್ಯಾಗವನ್ನೂ ಮಾಡಿಲ್ಲ, ಮಾಡುವುದೂ ಇಲ್ಲ. ಕೇವಲ ಇಂತಹ ಹೇಳಿಕೆಯಿಂದ ದೇಶದ ಭದ್ರತೆಗೆ ಆರೆಸೆಸ್ಸ್ ಧಕ್ಕೆಯುಂಟು ಮಾಡುತ್ತಿದೆ. ದೇಶದ ಯೋಧರ ಬಗ್ಗೆ ಗೌರವವಿದ್ದರೆ ಪ್ರಧಾನಿ ಮೋದಿ, ಭಾಗವತ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಜನಾರ್ದನ್, ಆನಂದ್, ಮನೋಹರ್, ರಾಜು, ಬಾಬು ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News