ಐಎಸ್‌ಐ ಸಂಪರ್ಕ: ಹನಿಟ್ರ್ಯಾಪ್‌ಗೆ ಸಿಕ್ಕಿದರೇ ಸೇನಾಧಿಕಾರಿ ?

Update: 2018-02-15 04:34 GMT

ಭೋಪಾಲ್, ಫೆ. 15: ಭಾರತೀಯ ಸೇನೆಯ ಗುಪ್ತಚರ ತಡೆ ವಿಭಾಗ ಮತ್ತು ಸೇನಾ ಗುಪ್ತಚರ ವಿಭಾಗ, ಲೆಫ್ಟಿನೆಂಟ್ ಕರ್ನಲ್ ಒಬ್ಬರ ಮನೆ ಮೇಲೆ ದಾಳಿ ನಡೆಸಿ ಅಧಿಕಾರಿಯನ್ನು ಬಂಧಿಸಿದೆ.

ಜಬಲ್ಪುರದ ಸೇನಾ ಕೇಂದ್ರ ಕಚೇರಿ ಆವರಣದಲ್ಲಿ ಈ ದಾಳಿ ನಡೆದಿದ್ದು, ಹನಿಟ್ರ್ಯಾಪ್‌ಗೆ ಬಲಿಯಾಗಿ ಪಾಕಿಸ್ತಾನದ ಐಎಸ್‌ಐ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಅಧಿಕಾರಿಯನ್ನು ಬಂಧಿಸಲಾಗಿದೆ.

ಅಧಿಕಾರಿಗಳು ಅಧಿಕೃತವಾಗಿ ಈ ಮಿಂಚಿನ ಕಾರ್ಯಾಚರಣೆ ಬಗ್ಗೆ ಬಾಯಿ ಬಿಟ್ಟಿಲ್ಲ. ಆದರೆ ಸೇನಾ ನೆಲೆಯ ಕಾರ್ಯಾಗಾರದಲ್ಲಿ ಅಧಿಕಾರಿಯಾಗಿದ್ದ ಈ ಬಂಧಿತ ಲೆಫ್ಟಿನೆಂಟ್ ಕರ್ನಲ್ ಚಲನವಲನಗಳ ಮೇಲೆ ಎರಡು ತಿಂಗಳಿಂದ ನಿಗಾ ಇಡಲಾಗಿತ್ತು ಎಂದು ಮೂಲಗಳು ಹೇಳಿವೆ.

ಹದಿನೈದು ವಾಹನಗಳಲ್ಲಿ ಆಗಮಿಸಿದ ಅಧಿಕಾರಿಗಳು, ಕಚೇರಿ ಹಾಗೂ ವಸತಿಗೃಹದಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡರು. ಇದು ಹನಿಟ್ರ್ಯಾಪ್ ಪ್ರಕರಣ ಎಂದು ಕೆಲವರು ಹೇಳುತ್ತಿದ್ದರೆ, ಲಂಚ ಪ್ರಕರಣ ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಹನಿಟ್ರ್ಯಾಪ್ ಆಮಿಷಕ್ಕೆ ಒಳಗಾದ ಅಧಿಕಾರಿ ಕೆಲ ವರ್ಗೀಕೃತ ಮಾಹಿತಿಯನ್ನು ಸೋರಿಕೆ ಮಾಡಿರುವುದು ದೃಢಪಟ್ಟಿದೆ ಎಂದು ಉನ್ನತ ಮೂಲಗಳು ಹೇಳಿವೆ.

ಅಧಿಕಾರಿಯನ್ನು ಸೇನಾ ಕೇಂದ್ರ ಕಮಾಂಡ್ ಕಚೇರಿಯಲ್ಲಿ ವಿಚಾರಣೆಗೆ ಗುರಿಪಡಿಸಲಾಗಿದೆ. ಮತ್ತಷ್ಟು ವಿಚಾರಣೆಗಾಗಿ ಲಕ್ನೋಗೆ ಕರೆದೊಯ್ಯಲಾಗುವುದು ಎಂದು ಮೂಲಗಳು ತಿಳಿಸಿವೆ.

ಅಧಿಕಾರಿಯನ್ನು ತನಿಖೆಗೆ ಒಳಪಡಿಸಿದ ಕ್ರಮದ ವಿರುದ್ಧ ಅಧಿಕಾರಿಯ ಪತ್ನಿ ಪ್ರತಿಭಟನೆ ನಡೆಸಿದರು ಎಂದೂ ಹೇಳಲಾಗಿದೆ. ಕಳೆದ ವಾರವಷ್ಟೇ ಭಾರತೀಯ ವಾಯುಪಡೆ ಅಧಿಕಾರಿಯೊಬ್ಬರು ಹನಿಟ್ರ್ಯಾಪ್‌ಗೆ ಬಲಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News