ಆದಾಯ ದೃಢೀಕರಣ ಪತ್ರ ನೀಡಿದರೆ ‘ಸ್ಥಳದಲ್ಲೇ ಪಡಿತರ ಚೀಟಿ’: ಸಚಿವ ಯು.ಟಿ.ಖಾದರ್

Update: 2018-02-15 12:50 GMT

►ಆಹಾರ ನಿರೀಕ್ಷಕರಿಗೆ ಲ್ಯಾಪ್‌ಟಾಪ್

►ಸಿಎಂ ಅನಿಲ ಭಾಗ್ಯ ಶೀಘ್ರ ಜಾರಿ

ಬೆಂಗಳೂರು, ಫೆ. 15: ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿರುವವರು, ತಮ್ಮ ಕುಟುಂಬದ ಆದಾಯ ದೃಢೀಕರಣ ಪತ್ರವನ್ನು ಆಹಾರ ನಿರೀಕ್ಷಕರಿಗೆ ಸಲ್ಲಿಸಿದರೆ ಸ್ಥಳದಲ್ಲೇ ಪಡಿತರ ಚೀಟಿ ವಿತರಿಸುವ ಹೊಸ ಯೋಜನೆಗೆ ಫೆ. 20ಕ್ಕೆ ಚಾಲನೆ ನೀಡಲಾಗುವುದು ಎಂದು ಆಹಾರ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಡಿತರ ಚೀಟಿ ವಿತರಣೆಯನ್ನು ಸರಳ-ವೇಗಗೊಳಿಸುವ ಉದ್ದೇಶದಿಂದ ದೇಶದಲ್ಲೆ ಮೊಟ್ಟ ಮೊದಲ ಬಾರಿಗೆ ಹೊಸ ಯೋಜನೆ ಜಾರಿಗೆ ತರಲಾಗಿದೆ. 1.20ಲಕ್ಷ ರೂ.ಮಿತಿಯ ಆದಾಯ ದೃಢೀಕರಣ ಪತ್ರ ನೀಡಿದರೆ ಆಹಾರ ನಿರೀಕ್ಷಕರು ಸ್ಥಳದಲ್ಲೇ ಪಡಿತರ ಚೀಟಿ ನೀಡಲಿದ್ದಾರೆ ಎಂದರು.

ಈಗಾಗಲೇ ಅರ್ಜಿ ಸಲ್ಲಿಸಿರುವವರು ಹೊಸ ಪಡಿತರ ಚೀಟಿಗೆ ಅರ್ಜಿಯ ಪ್ರತಿ ನೀಡಬೇಕು. ಎಲ್ಲ ಅರ್ಹರಿಗೂ ಪಡಿತರ ಚೀಟಿ ವಿತರಣೆ ಮಾಡಲಾಗುವುದು. ಅನಂತರ ಫಲಾನುಭವಿಗಳ ಪರಿಶೀಲನೆ ನಡೆಸಲಾಗುವುದು. ಒಂದು ವೇಳೆ ಅನರ್ಹರು ಎಂಬುದು ದೃಢಪಟ್ಟರೆ ಅಂತಹವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ನಿರೀಕ್ಷಕರಿಗೆ ಲ್ಯಾಪ್‌ಟಾಪ್: ತ್ವರಿತಗತಿಯಲ್ಲಿ ಹೊಸ ಪಡಿತರ ಚೀಟಿ ವಿತರಣೆ ಮಾಡುವ ಉದ್ದೇಶದಿಂದ ಆಹಾರ ನಿರೀಕ್ಷಕರಿಗೆ ಲ್ಯಾಪ್‌ಟಾಪ್ ಮತ್ತು ಕಲರ್ ಪ್ರಿಂಟರ್ ನೀಡಲಾಗುವುದು. ಅಲ್ಲದೆ, ಗುತ್ತಿಗೆ ಆಧಾರದ ಮೇಲೆ ಓರ್ವ ಡೇಟಾ ಎಂಟ್ರಿ ಆಪರೇಟರ್ ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಒಂದನೆ ಮತ್ತು ಎರಡನೆ ಹಂತದಲ್ಲಿ ಹೊಸ ಪಡಿತರ ಚೀಟಿಗೆ ಒಟ್ಟು 15ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದು, ಆ ಪೈಕಿ ಈಗಾಗಲೇ 13.50ಲಕ್ಷ ಕಾರ್ಡ್‌ಗಳನ್ನು ಅಂಚೆ ಮೂಲಕ ರವಾನಿಸಲಾಗಿದೆ. ಉಳಿದ ಕಾರ್ಡುಗಳು ಮುದ್ರಣವಾಗಿದ್ದು, ಆಧಾರ್ ವಿಳಾಸ ತಾಳೆಯಾಗದೆ ವಾಪಸ್ ಬಂದಿವೆ. ಆ ಕಾರ್ಡುಗಳನ್ನು ಗ್ರಾ.ಪಂ.ನೆರವು ಪಡೆದು ವಿಲೇವಾರಿ ಮಾಡಲಾಗುವುದು ಎಂದು ಖಾದರ್ ತಿಳಿಸಿದರು.

ಮೂರನೆ ಹಂತದಲ್ಲಿ ಹೊಸ ಪಡಿತರ ಚೀಟಿಗೆ 8ಲಕ್ಷ ಅರ್ಜಿಗಳು ಬಂದಿದ್ದು, ಫೆ.20ರಿಂದ 1.20 ಲಕ್ಷ ರೂ.ಮಿತಿಯೊಳಗೆ ಆದಾಯ ದೃಢೀಕರಣ ಸಲ್ಲಿಸಿದವರಿಗೆ ಸ್ಥಳಕ್ಕೆ ಪಡಿತರ ಚೀಟಿ ನೀಡಲಾಗುವುದು ಎಂದ ಅವರು, ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಅನಂತರ ಪಡಿತರ ಚೀಟಿ ವಿತರಣೆ ಮಾಡಲಾಗುವುದು ಎಂದರು.

ಅನಿಲ ಭಾಗ್ಯ ಶೀಘ್ರ ಜಾರಿ: ‘ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆಯನ್ನು ಶೀಘ್ರದಲ್ಲೆ ಜಾರಿಗೊಳಿಸಲಾಗುವುದು. ಫಲಾನುಭವಿಗಳಿಗೆ ಉಚಿತವಾಗಿ ಸ್ಟೌವ್, ಜತೆಗೆ ಡಿಮ್ಯಾಂಡ್ ಡ್ರಾಫ್ಟ್ (ಡಿಡಿ) ನೀಡಲಿದ್ದು, ಅದನ್ನು ಅಡುಗೆ ಅನಿಲ ವಿತರಕರಿಗೆ ನೀಡಿದ 3 ದಿನಗಳೊಳಗೆ ಅನಿಲ ಸಂಪರ್ಕ ಸಿಗಲಿದೆ ಎಂದು ಅವರು ತಿಳಿಸಿದರು.

‘ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ’ಗೆ ರಾಜ್ಯ ಸರಕಾರ ಹಣ ನೀಡುತ್ತಿದೆ. ಆದರೆ, ಹಣ ಮತ್ತು ಫಲಾನುಭವಿಗಳ ಪಟ್ಟಿಯನ್ನು ಅನಿಲ ವಿತರಕ ಕಂಪೆನಿಗಳಿಗೆ ನೀಡಲು ಕೇಂದ್ರ ವಿಧಿಸಿದ್ದ ಷರತ್ತಿಗೆ ನಮ್ಮ ವಿರೋಧವಿದೆ ಎಂದು ಆಕ್ಷೇಪಿಸಿದ ಅವರು, ಸೂಕ್ತ ಸಮಯಕ್ಕೆ ಫಲಾನುಭವಿಗೆ ಅನಿಲ ಸಂಪರ್ಕ ಕಲ್ಪಿಸದಿದ್ದರೆ ಅದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದರು.

ಕಾನೂನಿಗೆ ತಿದ್ದುಪಡಿ: ರಾಜ್ಯದಲ್ಲಿನ ಪೆಟ್ರೋಲ್ ಬಂದ್, ಅನಿಲ ಬಂಕ್‌ಗಳು ಹಾಗೂ ವಿತರಕರು ಇನ್ನು ಮುಂದೆ ರಾಜ್ಯ ಸರಕಾರದ ಅನುಮತಿ ಪಡೆಯಬೇಕು. ಈ ಸಂಬಂಧ ಕಾನೂನಿಗೆ ಅಗತ್ಯ ತಿದ್ದುಪಡಿ ತರಲಾಗುವುದು ಎಂದು ಖಾದರ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News