ಐಟಿ ದಾಳಿ ರಾಜಕೀಯ ಪ್ರೇರಿತ: ಡಾ.ಜಿ.ಪರಮೇಶ್ವರ್

Update: 2018-02-15 12:59 GMT

ಬೆಂಗಳೂರು, ಫೆ.15: ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ಮೇಲೆ ಐಟಿ ದಾಳಿ ನಡೆಸುತ್ತಿರುವುದು ರಾಜಕೀಯ ಪ್ರೇರಿತವಲ್ಲದೆ ಮತ್ತೇನು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದರು.

ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅನಾವಶ್ಯಕವಾಗಿ ಕಾಂಗ್ರೆಸ್ ಮುಖಂಡರ ಮೇಲೆ ದಾಳಿ ಮಾಡುತ್ತಿರುವುದು ಸರಿಯಲ್ಲ. ಈ ರೀತಿ ದಾಳಿ ಮಾಡುವ ಮೂಲಕ ನಮ್ಮ ಮುಖಂಡರ ವರ್ಚಸ್ಸನ್ನು ಕುಗ್ಗಿಸುವ ನಿಮ್ಮ ಪ್ರಯತ್ನ ಸಿದ್ಧಿಸುವುದಿಲ್ಲವೆಂದು ಪ್ರತಿಕ್ರಿಯಿಸಿದರು.

ಈಗಾಗಲೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ವೀಕ್ಷಕರನ್ನು ಕಳುಹಿಸಿದ್ದು, ಅಲ್ಲಿಂದ ಆಯ್ಕೆಗೊಂಡ ಅಭ್ಯರ್ಥಿಗಳ ಕುರಿತು ಚುನಾವಣಾ ಸಮಿತಿಯಲ್ಲಿ ಚರ್ಚಿಸಲಿದ್ದೇವೆ. ಕೆಲವು ಕ್ಷೇತ್ರಗಳಲ್ಲಿ ಒಂದೇ ಹೆಸರು ಬರಬಹುದು, ಎರಡು ಅಥವಾ ಮೂರು ಹೆಸರು ಬರಬಹುದು. ನಂತರ ಕೇಂದ್ರ ಪರಿಶೀಲನಾ ಸಮಿತಿ ಮುಂದೆ ಇಡಲಾಗುತ್ತದೆ. ಅಲ್ಲಿ ಟಿಕೆಟ್ ಅಂತಿಮಗೊಳ್ಳಲಿದೆ ಎಂದು ಅವರು ಹೇಳಿದರು.

ಬಿಎಸ್ಪಿ ಜತೆಗೆ ಜೆಡಿಎಸ್ ಹೊಂದಾಣಿಕೆ ವಿಚಾರ ಹೊಸದೇನಲ್ಲ. ಈ ಹೊಂದಾಣಿಕೆಯಿಂದ ಕಾಂಗ್ರೆಸ್ ಮತಗಳು ವಿಭಜನೆಗೊಳ್ಳುವುದಿಲ್ಲ. ಕಾಂಗ್ರೆಸ್ ಯಾರೊಂದಿಗೂ ಒಳ ಒಪ್ಪಂದಗಳನ್ನು ಮಾಡಿಕೊಳ್ಳುವುದಿಲ್ಲ. ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರಿಗೆ ಗೊಂದಲ ಬೇಡವೆಂದು ಅವರು ತಿಳಿಸಿದರು.

ಫೆ.24ರಿಂದ ರಾಹುಲ್ ಯಾತ್ರೆ

ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ನಡೆಸಿದ ಮೊದಲ ಹಂತದ ಯಾತ್ರೆ ಯಶಸ್ವಿಯಾಗಿದೆ. ಎರಡನೆ ಹಂತದ ಯಾತ್ರೆ ಫೆ.24ರಿಂದ 26ರವರೆಗೆ ಮುಂಬೈ ಕರ್ನಾಟಕದ ಬೆಳಗಾವಿಯಿಂದ ವಿಜಯಪುರ, ಬಾಗಲಕೋಟೆ, ಹುಬ್ಬಳ್ಳಿ ಮಾರ್ಗದಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News