ಮೋದಿ ಅರುಣಾಚಲ ಭೇಟಿಗೆ ಚೀನಾ ವಿರೋಧ

Update: 2018-02-15 16:05 GMT

ಬೀಜಿಂಗ್, ಫೆ. 15: ಪ್ರಧಾನಿ ನರೇಂದ್ರ ಮೋದಿ ಗುರುವಾರ ಅರುಣಾಚಲಪ್ರದೇಶಕ್ಕೆ ನೀಡಿದ ಭೇಟಿಗೆ ಚೀನಾ ಇಂದು ‘ತೀವ್ರ ವಿರೋಧ’ ವ್ಯಕ್ತಪಡಿಸಿದೆ ಹಾಗೂ ಈ ಬಗ್ಗೆ ತಾನು ಭಾರತಕ್ಕೆ ರಾಜತಾಂತ್ರಿಕ ಪ್ರತಿಭಟನೆಯನ್ನು ಸಲ್ಲಿಸುವುದಾಗಿ ಹೇಳಿದೆ.

ಭಾರತದ ರಾಜ್ಯ ಅರುಣಾಚಲಪ್ರದೇಶವನ್ನು ಚೀನಾ ದಕ್ಷಿಣ ಟಿಬೆಟ್ ಎಂಬುದಾಗಿ ಪರಿಗಣಿಸುತ್ತಿದೆ ಎನ್ನಲಾಗಿದೆ.

‘‘ಚೀನಾ-ಭಾರತ ಗಡಿ ವಿವಾದಕ್ಕೆ ಸಂಬಂಧಿಸಿ ಚೀನಾದ ನಿಲುವು ಸ್ಥಿರವಾಗಿದೆ ಹಾಗೂ ಸ್ಪಷ್ಟವಾಗಿದೆ’’ ಎಂದು ಚೀನಾದ ವಿದೇಶ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಇಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದರು.

ಮೋದಿ ಗುರುವಾರ ಅರುಣಾಚಲಪ್ರದೇಶಕ್ಕೆ ಭೇಟಿ ನೀಡಿದ್ದಾರೆ ಎಂಬ ವರದಿಗಳಿಗೆ ಅವರು ಪ್ರತಿಕ್ರಿಯಿಸುತ್ತಿದ್ದರು.

‘‘ತಥಾಕಥಿತ ಅರುಣಾಚಲಪ್ರದೇಶವನ್ನು ಚೀನಾ ಸರಕಾರ ಯಾವತ್ತೂ ಮಾನ್ಯ ಮಾಡಿಲ್ಲ ಹಾಗೂ ಈ ವಿವಾದಿತ ಪ್ರದೇಶಕ್ಕೆ ಭಾರತೀಯ ನಾಯಕ ಭೇಟಿ ನೀಡುವುದನ್ನು ಅದು ದೃಢವಾಗಿ ವಿರೋಧಿಸುತ್ತದೆ’’ ಎಂದು ಗೆಂಗ್ ಹೇಳಿರುವುದಾಗಿ ಸರಕಾರಿ ಒಡೆತನದ ಸುದ್ದಿ ಸಂಸ್ಥೆ ಕ್ಸಿನುವಾ ವರದಿ ಮಾಡಿದೆ.

ವಿವಾದಗಳನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾಗಳು ಮಹತ್ವದ ಒಮ್ಮತಕ್ಕೆ ಬಂದಿವೆ ಎಂದು ಹೇಳಿದ ಅವರು, ಜಮೀನು ವಿವಾದವನ್ನು ಮಾತುಕತೆ ಮತ್ತು ಸಮಾಲೋಚನೆಗಳ ಮೂಲಕ ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸುತ್ತಿವೆ ಎಂದು ಗೆಂಗ್ ನುಡಿದರು.

ಭಾರತೀಯ ಹಾಗೂ ವಿದೇಶಿ ನಾಯಕರು ಅರುಣಾಚಲಪ್ರದೇಶಕ್ಕೆ ಭೇಟಿ ನೀಡುವುದನ್ನು ಚೀನಾ ನಿರಂತರವಾಗಿ ಪ್ರತಿಭಟಿಸುತ್ತಾ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News