​ಬೆಂಗಳೂರು: ದಲಿತರಿಗೆ ಹಕ್ಕುಪತ್ರ ವಿತರಿಸಲು ಆಗ್ರಹಿಸಿ ಫೆ.18 ರಿಂದ ಅನಿರ್ದಿಷ್ಟಾವಧಿ ಧರಣಿ

Update: 2018-02-15 16:44 GMT

ಬೆಂಗಳೂರು, ಫೆ.15: ಹತ್ತಾರು ವರ್ಷಗಳಿಂದ ನಗರದ ಅಂಬೇಡ್ಕರ್ ಬಡಾವಣೆಗಳಲ್ಲಿ ವಾಸಿಸುತ್ತಿರುವ ದಲಿತರಿಗೆ ಹಕ್ಕುಪತ್ರಗಳನ್ನು ವಿತರಿಸದೆ ವಿಳಂಬ ನೀತಿ ಅನುಸರಿಸುತ್ತಿರುವ ಸರಕಾರದ ಕ್ರಮ ಖಂಡಿಸಿ ಫೆ.19 ರಂದು ನಗರದ ಪುರಭವನದಿಂದ ಸ್ವಾತಂತ್ರ ಉದ್ಯಾನವನದವರೆಗೂ ಬೃಹತ್ ಜಾಥ ಹಾಗೂ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲು ದಲಿತ ಸಂಘರ್ಷ ಸಮಿತಿ(ಸಮತಾವಾದ) ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸಂಸ್ಥಾಪಕ ಅಧ್ಯಕ್ಷ ಎಚ್.ಮಾರಪ್ಪ, ಪ್ರಭಾವಿ ರಾಜಕಾರಣಿಗಳು, ಕಾರ್ಪೋರೇಟ್ ಕಂಪೆನಿಗಳು, ಉಳ್ಳವರು, ಸ್ಥಳೀಯ ಪ್ರಭಾವಿಗಳು ದಬ್ಬಾಳಿಕೆ ನಡೆಸಿ ನೂರಾರು ಎಕರೆ ಭೂಮಿಯನ್ನು ಕಬಳಿಸುತ್ತಿದ್ದಾರೆ. ಆದರೆ, ನಿವೇಶನ ರಹಿತರಿಗೆ ಹಾಗೂ ಭೂಮಿಯಿಲ್ಲದವರಿಗೆ ಭೂಮಿ ಮತ್ತು ನಿವೇಶನ ನೀಡಲು ಕಾನೂನು ತೊಡಕಿದೆ ಎಂದು ಸಬೂಬು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರ ಪ್ರದೇಶದಲ್ಲಿರುವ ದಲಿತರು ಬಾಡಿಗೆ ಮನೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಅವರಿಗೆ ಮನೆ ಬಾಡಿಗೆ ಕಟ್ಟಲು ಸಾಧ್ಯವಾಗದೆ ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಮತ್ತೊಂದು ಕಡೆ, ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ, ಕುಟುಂಬ ನಿರ್ವಹಣೆ ಕಠಿಣ ಮಾಡಲು ಕಷ್ಟಪಡುತ್ತಿದ್ದಾರೆ. ಇದರ ನಡುವೆ ಸರಕಾರಿ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡಿರುವ ದಲಿತರನ್ನು ಒಕ್ಕಲೆಬ್ಬಿಸುವ ಮೂಲಕ ನಮ್ಮನ್ನಾಳುತ್ತಿರುವ ಸರಕಾರಗಳು ದಲಿತರನ್ನು ಬೀದಿ ಪಾಲು ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಬೆಂಗಳೂರು ನಗರ ಜಿಲ್ಲೆಯ ಸಿಂಗಸಂದ್ರ ಗ್ರಾಮದ ಅಂಬೇಡ್ಕರ್ ನಗರದಲ್ಲಿ 35 ವರ್ಷಗಳಿಂದ ಸರಕಾರಿ ಜಾಗದಲ್ಲಿ 350 ಕ್ಕೂ ಅಧಿಕ ದಲಿತ ಕುಟುಂಬಗಳು ಮನೆಗಳನ್ನು ನಿರ್ಮಿಸಿಕೊಂಡಿದ್ದು, ಸರಕಾರ ಇವರಿಗೆ ಹಕ್ಕುಪತ್ರ ನೀಡದೆ ವಂಚಿಸುತ್ತಿದೆ. ದಕ್ಷಿಣ ತಾಲೂಕಿನ ಚಿಕ್ಕಬೇಗೂರು, ಶ್ರೀನಗರ ಗುಟ್ಟೆ ಪ್ರದೇಶದಲ್ಲಿ ಹತ್ತಾರು ವರ್ಷಗಳಿಂದ ಮನೆಗಳನ್ನು ನಿರ್ಮಿಸಿಕೊಂಡಿರುವವರಿಗೆ ಕೂಡಲೇ ಹಕ್ಕುಪತ್ರ ನೀಡಬೇಕು ಎಂದು ಅವರು ಆಗ್ರಹಿಸಿದರು.

ಬೆಂಗಳೂರು ಉತ್ತರ ತಾಲೂಕಿನ ಕೊಂಡಪ್ಪ ಬಡಾವಣೆ, ಕೋಗಿಲು ಬಡಾವಣೆ, ಹೆಬ್ಬಾಳ ಕುಂತಿ ಗ್ರಾಮ, ಮತ್ತೀಕೆರೆ ಎಂ.ಆರ್.ಜಯರಾಂ ಕಾಲನಿ, ಲಗ್ಗೆರೆ, ಹೆಗ್ಗನಹಳ್ಳಿ ಗ್ರಾಮಗಳಲ್ಲಿ ನೂರಾರು ದಲಿತರು ಮನೆಗಳನ್ನು ನಿರ್ಮಿಸಿಕೊಂಡಿದ್ದು, ಅವರಿಗೆ ಸೂಕ್ತ ಭದ್ರತೆಯಿಲ್ಲದೆ ನರಳುತ್ತಿದ್ದಾರೆ. ಹಾಗೂ ಯಲಹಂಕ ಉಪನಗರದ ಡಾ.ಬಿ.ಆರ್.ಅಂಬೇಡ್ಕರ್ ನಗರ ಸೇರಿದಂತೆ ನಗರ ಮತ್ತು ಗ್ರಾಮಾಂತರ ಜಿಲ್ಲೆಯ ನೂರಾರು ದಲಿತರು ಮನೆಗಳಿಲ್ಲದೆ ವಂಚಿತರಾಗಿದ್ದು, ಹಲವರಿಗೆ ಇದುವರೆಗೂ ಹಕ್ಕುಪತ್ರಗಳನ್ನು ನೀಡಿಲ್ಲ. ಹೀಗಾಗಿ, ಕೂಡಲೇ ಎಲ್ಲರಿಗೂ ಹಕ್ಕುಪತ್ರಗಳನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನಾ ಧರಣಿಯಲ್ಲಿ ನಿಡುಮಾಮಿಡಿ ಮಠದ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಹಿರಿಯ ಸಾಹಿತಿ ಚಂಪಾ, ಸಾಹಿತಿ ಕೆ.ಎಸ್.ಭಗವಾನ್, ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಸಿಪಿಎಂ ಮುಖಂಡ ಜಿ.ಎನ್.ನಾಗರಾಜ್, ಸಿಪಿಐ ಮುಖಂಡ ಸಾಥಿ ಸುಂದರೇಶ್ ಸೇರಿದಂತೆ ಹಲವರು ಭಾಗವಹಿಸಿ ಬೆಂಬಲ ನೀಡಲಿದ್ದಾರೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News