ರಕ್ಷಣಾ ಬಜೆಟ್‌ನಲ್ಲಿ ಬ್ರಿಟನನ್ನು ಹಿಂದಿಕ್ಕಿದ ಭಾರತ

Update: 2018-02-15 17:10 GMT

ಲಂಡನ್, ಫೆ. 15: ರಕ್ಷಣಾ ಬಜೆಟ್‌ನಲ್ಲಿ ಭಾರತ ಜಗತ್ತಿನ 5 ಅಗ್ರ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ ಹಾಗೂ ಬ್ರಿಟನನ್ನು ಹಿಂದಿಕ್ಕಿದೆ ಎಂದು ಲಂಡನ್‌ನಲ್ಲಿರುವ ಜಾಗತಿಕ ಸಲಹಾ ಸಂಸ್ಥೆಯೊಂದರ ವರದಿ ತಿಳಿಸಿದೆ.

2017ರಲ್ಲಿ ಭಾರತ 52.5 ಬಿಲಿಯ ಡಾಲರ್ (ಸುಮಾರು 3.36 ಲಕ್ಷ ಕೋಟಿ ರೂಪಾಯಿ) ರಕ್ಷಣಾ ಬಜೆಟ್‌ನೊಂದಿಗೆ ಬ್ರಿಟನನ್ನು ಹಿಂದಿಕ್ಕಿ ಜಗತ್ತಿನ 5ನೆ ಅತಿ ದೊಡ್ಡ ರಕ್ಷಣೆಗಾಗಿ ಖರ್ಚು ಮಾಡುವ ದೇಶವಾಗಿ ಹೊರಹೊಮ್ಮಿದೆ. ಇದು 2016ರ ಅದರ ರಕ್ಷಣಾ ಬಜೆಟ್ 51.1 ಬಿಲಿಯ ಡಾಲರ್ (3.27 ಲಕ್ಷ ಕೋಟಿ ರೂಪಾಯಿ)ಗಿಂತ ಅಧಿಕವಾಗಿದೆ ಎಂದು ‘ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಫಾರ್ ಸ್ಟ್ರಾಟಜಿಕ್ ಸ್ಟಡೀಸ್ (ಐಐಎಸ್‌ಎಸ್)’ ಹೇಳಿದೆ.

ಇದಕ್ಕೆ ವ್ಯತಿರಿಕ್ತವಾಗಿ, ಬ್ರಿಟನ್‌ನ ರಕ್ಷಣಾ ಬಜೆಟ್ 2016ರಲ್ಲಿದ್ದ 52.5 ಬಿಲಿಯ ಡಾಲರ್ (3.36 ಲಕ್ಷ ಕೋಟಿ ರೂಪಾಯಿ)ನಿಂದ 2017ರಲ್ಲಿ 50.7 ಬಿಲಿಯ ಡಾಲರ್ (3.24 ಲಕ್ಷ ಕೋಟಿ ರೂಪಾಯಿ)ಗೆ ಇಳಿದಿದೆ.

‘‘ಇದು ಭಾರತ ಮತ್ತು ಬ್ರಿಟನ್‌ಗಳ ನಡುವಿನ ಸೇನಾ ಸಮತೋಲನದಲ್ಲಿ ಆಗಿರುವ ಮಹತ್ವದ ಬದಲಾವಣೆಯೊಂದನ್ನು ಸೂಚಿಸುತ್ತದೆ. ಭಾರತವು ಪ್ರಾದೇಶಿಕ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸಲು ಬ್ರಿಟನ್‌ಗಿಂತ ಹೆಚ್ಚಿನ ಪ್ರಯತ್ನಗಳನ್ನು ಮಾಡುತ್ತಿದೆ ಎನ್ನುವುದನ್ನು ಇದು ತೋರಿಸುತ್ತದೆ’’ ಎಂದು ಐಐಎಸ್‌ಎಸ್‌ನ ದಕ್ಷಿಣ ಏಶ್ಯ ಸೀನಿಯರ್ ಫೆಲೊ ರಾಹುಲ್ ರಾಯ್-ಚೌಧುರಿ ಹೇಳುತ್ತಾರೆ.

ಅಮೆರಿಕ, ಚೀನಾ, ಸೌದಿ ಅರೇಬಿಯ, ರಶ್ಯ ಮತ್ತು ಭಾರತ ಕ್ರಮವಾಗಿ ರಕ್ಷಣಾ ಬಜೆಟ್‌ನಲ್ಲಿ ಒಂದರಿಂದ ಐದನೆ ಸ್ಥಾನಗಳಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News