ತಿಪ್ಪಗೊಂಡನಹಳ್ಳಿ ಹಳ್ಳಿ ಜಲಾಶಯದಿಂದ ನಗರಕ್ಕೆ ಶುದ್ಧೀಕರಿಸಿದ ನೀರು: ಕೆ.ಜೆ.ಜಾರ್ಜ್

Update: 2018-02-15 17:18 GMT

ಬೆಂಗಳೂರು,ಫೆ.15: ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಬೆಂಗಳೂರಿನ ವಿವಿಧ ಭಾಗಗಳಿಗೆ ಸುಮಾರು 12ದಶಲಕ್ಷ ಲೀಟರ್ ನೀರು ಪೂರೈಸಲು ಸಿದ್ಧತೆ ನಡೆಸಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ಲಮಂಡಳಿವತಿಯಿಂದ ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟದಲ್ಲಿ ಆಯೋಜಿಸಿದ್ದ ‘ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನೈಸರ್ಗಿಕ ಜೈವಿಕ ತಂತ್ರಜ್ಞಾನ ಯೋಜನೆ’ (ಎನ್‌ಬಿಎಸ್)ಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಅರ್ಕಾವತಿ ಪುನಶ್ಚೇತನದ ಭಾಗವಾಗಿ ಹೆಸರಘಟ್ಟದಿಂದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಸೇರುವ ಕೊಳಚೆ ನೀರನ್ನು ಎನ್‌ಬಿಎಸ್ ಮೂಲಕ ಶುದ್ಧೀಕರಿಸುವ ಯೋಜನೆಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಮುಂದಿನ ಎಂಟು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಈ ಯೋಜನೆಯಿಂದ ನಗರದ ಜನರಿಗೆ ಕುಡಿಯುವ ನೀರು ಪೂರೈಸಬಹುದಾಗಿದೆ ಎಂದರು.

11.9.ಕೋಟಿ ರೂ. ಅಂದಾಜು ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಮೊದಲ ಹಂತದಲ್ಲಿ 800 ಮೀಟರ್ ವ್ಯಾಪ್ತಿಯಲ್ಲಿ ಜಲ ಸಸ್ಯಗಳನ್ನು ಬೆಳೆಸಿ, ನೈಸರ್ಗಿಕವಾಗಿ ನೀರು ಶುದ್ಧೀಕರಣ ಮಾಡಲಾಗುತ್ತದೆ. ಮಾದಾವರ ಕೆರೆಯಿಂದ ಸುಮಾರು 12ಎಂಎಲ್‌ಡಿ ನೀರು ಹಾಗೂ ಅರ್ಕಾವತಿ ಈ ಮೂಲಕವೇ ಹಾದು ಹೋಗುತ್ತದೆ. ಇಲ್ಲಿ ನೀರನ್ನು ಸಂಗ್ರಹಿಸಿ ಮಾಲಿನ್ಯ ಉಂಟು ಮಾಡುವ ಬ್ಯಾಕ್ಟೀರಿಯಾ ತೆಗೆಯಲಾಗುತ್ತದೆ ಎಂದು ವಿವರಿಸಿದರು.

ಸಂಸದ ಎಂ.ವೀರಪ್ಪ ಮೊಯ್ಲಿ ಮಾತನಾಡಿ, 38 ಕೋಟಿ ರೂ.ವೆಚ್ಚದಲ್ಲಿ ಹೆಸರಘಟ್ಟ ಸುತ್ತಮುತ್ತಲಿನ ಆರು ಗ್ರಾಮಗಳಿಗೆ ಒಳಚರಂಡಿ ವ್ಯವಸ್ಥೆ ಮಾಡಲಾಗುವುದು. ಎತ್ತಿನ ಹೊಳೆ ಕಾಮಗಾರಿ ಪೂರ್ಣಗೊಂಡರೆ ಕೋಲಾರ ಚಿಕ್ಕಬಳ್ಳಾಪುರ, ಸೇರಿದಂತೆ ಹಲವು ಪ್ರದೇಶಗಲಿಗೆ ನೀರು ದೊರೆಯಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ಎಸ್.ಆರ್.ವಿಶ್ವನಾಥ್, ವಿಧಾನ ಪರಿಷತ್ ಸದಸ್ಯ ನಾರಾಯಣ ಸ್ವಾಮಿ, ಜಿ.ಪಂ. ಸದಸ್ಯ ಚೊಕ್ಕನಹಳ್ಳಿ ವೆಂಕಟೇಶ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News