ಹುಸಿ ಭರವಸೆಗಳ ಕೇಂದ್ರ ಕೃಷಿ ಬಜೆಟ್: ಪ್ರಕಾಶ್ ಕಮ್ಮರಡಿ

Update: 2018-02-15 17:27 GMT

ಬೆಂಗಳೂರು, ಫೆ.15: ಕೇಂದ್ರ ಸರಕಾರದ ಇತ್ತೀಚಿನ ಬಜೆಟ್‌ನಲ್ಲಿ ರೈತರ ಉತ್ಪನ್ನಗಳಿಗೆ ಶೇ.50 ರಷ್ಟು ಲಾಭ ನೀಡಲಾಗಿದೆ ಎಂದು ಘೋಷಿಸಿರುವುದು ಹುಸಿ ಭರವಸೆಯಾಗಿದೆ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಸಂಶಯ ವ್ಯಕ್ತಪಡಿಸಿದ್ದಾರೆ.

ಗುರುವಾರ ನಗರದ ಕೃಷಿ ಇಲಾಖೆಯ ಸಮೃದ್ಧಿ ಸಭಾಂಗಣದಲ್ಲಿ ‘ರೈತರ ಉತ್ಪನ್ನಗಳಿಗೆ ಶೇ.50ರಷ್ಟು ಲಾಭ’ ನೀಡುವ ವಿಚಾರದ ಮೇಲೆ ತಾಂತ್ರಿಕ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿರುವ ಆಯವ್ಯಯ ಕೃಷಿತಜ್ಞ ಡಾ.ಸ್ವಾಮಿನಾಥನ್ ವರದಿಗೆ ಅನುಗುಣವಾಗಿದೆ ಎಂದು ಭಾವಿಸಲಾಗಿತ್ತು. ಆದರೆ, ಈಗಾಗಲೇ ಪ್ರಸಕ್ತ ಸಾಲಿನ ಹಿಂಗಾರು ಬೆಳೆಗಳಿಗೆ ಶೇ.50 ರಷ್ಟು ಲಾಭಾಂಶ ಆಧಾರದಲ್ಲಿ ಬೆಂಬಲಬೆಲೆ ನೀಡಲಾಗಿದೆ ಎಂದು ಹೇಳಿರುವುದು ಸಂಶಯ ಮೂಡಿಸಿದೆ ಎಂದರು.

ಹಿಂದಿನ ಯುಪಿಎ ಸರಕಾರ ಡಾ. ಮನಮೋಹನ್ ಸಿಂಗ್ ಅವಧಿಯಲ್ಲಿ ವಿವಿಧ ಕೃಷಿಬೆಳೆಗಳಿಗೆ ಬೆಂಬಲ ಬೆಲೆ ಏರಿಸಿ, ರಾಜ್ಯದ 13 ಬೆಳೆಗಳಿಗೆ ಶೇ.15ರಷ್ಟು ಹೆಚ್ಚಳ ಮಾಡಿತ್ತು. ಆದರೆ, ಇಂದಿನ ಎನ್‌ಡಿಎ ಸರಕಾರ ಶೇ.5ರಷ್ಟು ಬೆಂಬಲ ಬೆಲೆ ಹೆಚ್ಚಳ ಮಾಡಿದೆ ಎಂದು ತಿಳಿಸಿದರು.

ಪ್ರಸಕ್ತ ವರ್ಷದಲ್ಲಿ ತೊಗರಿ, ಕಡಲೆ ಹೊರತುಪಡಿಸಿದರೆ ಇತರ ಬೆಳೆಗಳಿಗೆ ಬೆಂಬಲ ಬೆಲೆ ಮೂಲಕ ಲಾಭಾಂಶ ತೃಪ್ತಿಕರವಾಗಿಲ್ಲ. ಹಿಂದಿನಂತೆಯೆ 13 ಪ್ರಮುಖ ಬೆಳೆಗಳಿಗೆ ಮಾತ್ರ ನಿಗದಿತ ಬೆಂಬಲ ಬೆಲೆ ಘೋಷಿಸಿದ್ದು, ಉಳಿದ ಬೆಳೆಗಳಿಗೆ ಸಮಗ್ರ ಬೆಂಬಲ ಬೆಲೆ ನೀಡದಿರುವುದು ರೈತರಲ್ಲಿ ಆತಂಕ ಸೃಷ್ಟಿಸಿದೆ. ಅಲ್ಲದೆ, ಈ ಹಿಂದೆ ನಿಗದಿಪಡಿಸಿದ್ದ ಬೆಂಬಲ ಬೆಲೆ ಸಮರ್ಪಕವಾಗಿ ಅನುಷ್ಠಾನವಾಗದೆ ರೈತರು ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿದರು.

ಯಾವುದೇ ತೋಟಗಾರಿಕಾ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆ ವ್ಯಾಪ್ತಿಯಲ್ಲಿ ಸೇರಿಸಿಲ್ಲ. ಕೆಲವು ಬೆಳೆಗಳಿಗೆ ಮಾತ್ರ ಬೆಂಬಲ ಬೆಲೆ ನೀಡಲಾಗುವುದರ ಜತೆಗೆ ಲಾಭಾಂಶ ನೀಡಲಾಗುವುದು ಎಂದು ತಿಳಿಸಿದ್ದಾರೆ. ಹೀಗಾಗಿ, ತೋಟಗಾರಿಕಾ ಬೆಲೆಗಳನ್ನು ಕೂಡ ಬೆಂಬಲ ಬೆಲೆ ವ್ಯಾಪ್ತಿಗೆ ತರಬೇಕೆಂದು ಒತ್ತಾಯಿಸಿದರು.
ಕೃಷಿ ಬೆಲೆ ಆಯೋಗದ ಆಯುಕ್ತ ಸತೀಶ್, ಅರ್ಥಶಾಸ್ತ್ರ ವಿಶ್ಲೇಷಣಾ ಘಟಕದ ಪ್ರೊ. ಮಧುರಾ ಸ್ವಾಮಿನಾಥನ್, ಕೃಷಿ ತಜ್ಞೆ ಡಾ. ಕವಿತಾ ಕುರುಗಂಟಿ, ಕೃಷಿಕರಾದ ವಸಂತಕುಮಾರ್, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ.ನಾರಾಯಣ ಗೌಡ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News