ಕೇರಳದಲ್ಲಿ ಇಂದಿನಿಂದ ಖಾಸಗಿ ಬಸ್ಸುಗಳ ಅನಿರ್ದಿಷ್ಟಾವಧಿ ಮುಷ್ಕರ

Update: 2018-02-16 04:45 GMT

ಕೊಚ್ಚಿನ್, ಫೆ. 16: ಖಾಸಗಿ ಬಸ್ ಪ್ರಯಾಣ ದರ ಮತ್ತು ವಿದ್ಯಾರ್ಥಿ ಪಾಸ್‌ಗಳ ದರ ಏರಿಕೆ ಪ್ರಸ್ತಾವವನ್ನು ರಾಜ್ಯ ಸರ್ಕಾರ ತಿರಸ್ಕರಿಸಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಖಾಸಗಿ ಬಸ್ ಮಾಲಕರ ಸಂಘ ಪ್ರಕಟಿಸಿದೆ.

ಹನ್ನೆರಡು ಬಸ್ ಮಾಲಕರ ಸಂಘಗಳನ್ನು ಪ್ರತಿನಿಧಿಸುವ ಜಂಟಿ ಸಮನ್ವಯ ಸಮಿತಿ ಈ ನಿರ್ಧಾರ ಕೈಗೊಂಡಿದೆ. ಪ್ರತಿಭಟನೆಯ ಅಂಗವಾಗಿ ಎಲ್ಲ 12 ಬಸ್ ಮಾಲಕರ ಸಂಘದ ಪ್ರತಿನಿಧಿಗಳು ತಿರುವನಂತಪುರದಲ್ಲಿ ರಾಜ್ಯ ಸಚಿವಾಲಯದ ಮುಂದೆ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕನಿಷ್ಠ ಪ್ರಯಾಣದರವನ್ನು 7 ರೂಪಾಯಿಗಳಿಂದ 8 ರೂಪಾಯಿಗೆ ಸರ್ಕಾರ ಹೆಚ್ಚಿಸಿದ್ದರೂ, ಇದು ಮಾಲಕರಿಗೆ ಸಮಾಧಾನ ತಂದಿಲ್ಲ. ಪದೇ ಪದೇ ಇಂಧನ ಬೆಲೆ ಮತ್ತು ತೆರಿಗೆ ದರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ದರ ನ್ಯಾಯಸಮ್ಮತವಲ್ಲ. ಕನಿಷ್ಠ ದರವನ್ನು 10 ರೂಪಾಯಿಗೆ ಹೆಚ್ಚಿಸುವವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದು ಜೆಸಿಸಿ ಅಧ್ಯಕ್ಷ ಲಾರೆನ್ಸ್ ಬೇಬಿ ಹೇಳಿದ್ದಾರೆ.

ವಿದ್ಯಾರ್ಥಿ ಪಾಸ್ ದರ ಕೂಡಾ 2014ರ ಬಳಿಕ ಪರಿಷ್ಕರಣೆಯಾಗಿಲ್ಲ. ಶೇಕಡ 40ರಿಂದ 60ರವರೆಗೂ ಪ್ರಯಾಣಿಕರು ವಿದ್ಯಾರ್ಥಿಗಳಾಗಿರುವುದರಿಂದ ಬಸ್ಸುಗಳು ನಷ್ಟ ಅನುಭವಿಸುತ್ತಿವೆ ಎನ್ನುವುದು ಅವರ ಪ್ರತಿಪಾದನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News