ರಾಜ್ಯ ಬಜೆಟ್-2018: ಗಣ್ಯರ ಪ್ರತಿಕ್ರಿಯೆಗಳು ಹೀಗಿವೆ..

Update: 2018-02-16 16:37 GMT

ರೈತರ ಪಾಲಿಗೆ ನಿರಾಶೆ
‘ರೈತರ ಸಾಲಮನ್ನಾ ಆಗಬೇಕೆಂಬ ಬೇಡಿಕೆಗೆ ಯಾವುದೇ ನಿರ್ಧಾರ ಕೈಗೊಳ್ಳದೆ ಇರುವುದು ಹಾಗೂ ಸರಕಾರವೇ ರಚಿಸಿದ್ದ ಕೃಷಿ ಬೆಲೆ ಆಯೋಗದ ವರದಿಯಲ್ಲಿ ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡುವ ಯಾವುದೇ ಪ್ರಸ್ತಾಪ ಮಾಡದಿರುವುದು ನಿರಾಶೆ ಮೂಡಿಸಿದೆ’
-ಕುರುಬೂರು ಶಾಂತಕುಮಾರ್ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ

ಜನಪರ ಬಜೆಟ್
‘ಶಿಕ್ಷಣ, ಆರೋಗ್ಯ, ಕೃಷಿ, ಮಹಿಳೆಯರ ಕಲ್ಯಾಣ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿದ್ದು, ಮೂಲ ಸೌಲಭ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಮಹಿಳೆಯರಿಗೆ ಸ್ನಾತಕೋತ್ತರದ ವರೆಗೆ ಉಚಿತ ಶಿಕ್ಷಣ, ಪತ್ರಿಕೆ ಹಂಚುವ ಅತ್ಯಂತ ಸಾಮಾನ್ಯರಿಗೂ 2 ಕೋಟಿ ರೂ. ಕ್ಷೇಮ ನಿಧಿ ಸ್ಥಾಪಿಸಲಾಗಿದೆ. ‘ರೈತ ಬೆಳಕು’ ಒಂದು ದೂರದೃಷ್ಟಿ ಯೋಜನೆಯಾಗಿದ್ದು ಒಣಭೂಮಿ ಕೃಷಿಕರಿಗೆ ಅನುಕೂಲಕರ. ಮದರಸಾ ಆಧುನೀಕರಣದ ಮೂಲಕ ಅವರಿಗೆ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಯೂನಿರ್ವಸೆಲ್ ಹೆಲ್ತ್ ಕಾರ್ಡ್ ನಿಜಕ್ಕೂ ಶ್ಲಾಘನೀಯ. ಎಲ್ಲರನ್ನು ಒಳಗೊಳ್ಳುವ ‘ಓಲೈಕೆ’ ಪ್ರಯತ್ನದ ಜನಪರ ಬಜೆಟ್ ಇದು’
-ಪ್ರೊ.ಕೇಶವ್ ಆರ್ಥಿಕ ತಜ್ಞ

ಕೇವಲ ಘೋಷಣೆಯಷ್ಟೇ
‘ಚುನಾವಣಾ ಲಾಭದ ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮಂಡನೆ ಮಾಡಿದ್ದಾರೆಯೇ ಹೊರತು, ಜನರ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ಅಲ್ಲ. ಮತದಾರರನ್ನು ಸೆಳೆಯಲು ಒಂದೆರಡು ಯೋಜನೆಗಳು ಘೋಷಣೆ ಮಾಡಿದ್ದಾರೆ. ಆದರೆ, ಅದಕ್ಕೆ ಹಣ ಎಲ್ಲಿಂದ ನೀಡುತ್ತಾರೆಂದು ಹೇಳಲಿಲ್ಲ. ಮಾ.31ಕ್ಕೆ ಹಣಕಾಸಿನ ವರ್ಷ ಮುಗಿಯಲಿದ್ದು, ಅದರೊಳಗೆ ಸಿಎಂ ಹಣ ಒದಗಿಸಬೇಕು. ಇಲ್ಲದಿದ್ದರೆ, ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಯೋಜನೆಗಳು ಕೇವಲ ಘೋಷಣೆಗಳಾಗಿಯೇ ಉಳಿದಿರುತ್ತವೆ’
-ಜಿ.ವಿ.ಶ್ರೀರಾಮರೆಡ್ಡಿ ಸಿಪಿಎಂ ರಾಜ್ಯ ಕಾರ್ಯದರ್ಶಿ

ವೇತನ ಹೆಚ್ಚಳಕ್ಕೆ ಅಭಿನಂದನೆ

‘ಆಯವ್ಯಯದಲ್ಲಿ ಸರಕಾರಿ ನೌಕರರಿಗೆ ಶೇ.30ರಷ್ಟು ವೇತನ ಹೆಚ್ಚಳ ಮಾಡಿ, ಇದರಿಂದ ರಾಜ್ಯದಲ್ಲಿರುವ 5.93ಲಕ್ಷ ನೌಕರರು ಹಾಗೂ 5.73ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆಂದು ಘೋಷಿಸಿರುವುದು ಸ್ವಾಗತಾರ್ಹ. ಈ ಸಂಬಂಧ ಸರಕಾರದ ಆದೇಶಗಳು ಈ ತಿಂಗಳ ಅಂತ್ಯದೊಳಗೆ ಹೊರಬೀಳಲಿದೆ. ಇದಕ್ಕಾಗಿ ಸಮಸ್ತ ಸರಕಾರಿ ನೌಕರರ ಪರವಾಗಿ ಮುಖ್ಯಮಂತ್ರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.’
-ಬಿ.ಪಿ.ಮಂಜೇಗೌಡ ಸರಕಾರಿ ನೌಕರರ ಸಂಘದ ಅಧ್ಯಕ್ಷ

ವಕೀಲರಿಗೆ ಅನುಕೂಲವಿಲ್ಲ
ಯುವ ವಕೀಲರಿಗೆ ಪ್ರತಿ ತಿಂಗಳು 5 ಸಾವಿರ ರೂ. ಸ್ಟೈಪಂಡ್ ನೀಡಬೇಕೆಂದು ಸರಕಾರದ ಬಳಿ ಪ್ರಸ್ತಾಪ ಮಾಡಿದ್ದರೂ 2018-19ರ ಆಯವ್ಯಯದಲ್ಲಿ ಈ ವಿಚಾರವನ್ನು ಪಸ್ತಾಪ ಮಾಡಿಲ್ಲ. ಪ್ರೆಸ್ ಕ್ಲಬ್ ಹಾಗೂ ಸಿಟಿ ಸಿವಿಲ್ ಕೋರ್ಟ್ ಬಳಿ ವಕೀಲರ ಚೇಂಬರ್ ನಿರ್ಮಾಣ ಮಾಡಬೇಕೆಂದು ಮನವಿ ಮಾಡಿಕೊಳ್ಳಲಾಗಿತ್ತು. ಆ ವಿಚಾರವೂ ಪ್ರಸ್ತಾಪವಾಗಿಲ್ಲ. ಆದರೆ, ಉಳಿದಂತೆ ರಾಜ್ಯ ಸರಕಾರ ಕೃಷಿ, ಇಂಧನ, ಶಿಕ್ಷಣ ಕ್ಷೇತ್ರಗಳಿಗೆ ಎಲ್ಲ ರೀತಿಯ ಸಹಕಾರ ನೀಡಿದೆ.
-ಶಂಕ್ರಪ್ಪ, ಹೈಕೋರ್ಟ್ ಹಿರಿಯ ವಕೀಲ

ಮಹಿಳೆಯರಿಗೆ ಬಜೆಟ್ ಆಶಾದಾಯಕವಾಗಿಲ್ಲ
ಲಿಂಗತ್ವ ಸಂವೇದನೆ ಮತ್ತು ಮಹಿಳಾ ಶಿಕ್ಷಣದ ಕಡೆ ಕೊಂಚ ಗಮನ ಕೊಟ್ಟರೂ ಮಹಿಳೆಯರ ಆರ್ಥಿಕ ಸಬಲೀಕರಣ ಅಥವಾ ಉದ್ಯೋಗ ಸೃಷ್ಟಿಯ ಬಗ್ಗೆ ಸಾಕಷ್ಟು ನಿಗಾ ವಹಿಸಿಲ್ಲ. ಸರಕಾರದ ಹಲವು ಯೋಜನೆಗಳಲ್ಲಿ ಕನಿಷ್ಠ ಕೂಲಿಯನ್ನೂ ಕಡೆಗಣಿಸಿ ದುಡಿಸಿಕೊಳ್ಳುತ್ತಿರುವ ಮಹಿಳೆಯರಿಗೆ ಬಜೆಟ್ ಆಶಾದಾಯಕವಾಗಿಲ್ಲ. ದಮನಿತ ಮಹಿಳೆಯರ ಪುನರ್ವಸತಿಗೆ ನಿರ್ದಿಷ್ಟ ಕಾರ್ಯಕ್ರಮ ರೂಪಿಸುವಲ್ಲಿ ಬಜೆಟ್ ವಿಫಲವಾಗಿದೆ.
-ಎ.ಜ್ಯೋತಿ, ಭಾರತೀಯ ಮಹಿಳಾ ಒಕ್ಕೂಟ ಅಧ್ಯಕ್ಷೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News