ಯಡಿಯೂರಪ್ಪ ವಿರುದ್ಧ ಬಿಜೆಪಿ

Update: 2018-02-17 04:16 GMT

ಬಿಜೆಪಿಯ ಪರಿವರ್ತನೆಯ ಯಾತ್ರೆ ವಿಫಲವಾಗಿದೆಯೆನ್ನುವುದಕ್ಕೆ ಸಾಕ್ಷಿಯಾಗಿ ಬಿಜೆಪಿ ಮುಖಂಡ ಸಾರ್ವಜನಿಕವಾಗಿ ಕಣ್ಣೀರಿಟ್ಟಿದ್ದಾರೆ. ಬಿಜೆಪಿಯೊಳಗಿನ ನಾಯಕರನ್ನೇ ಪರಿವರ್ತನೆ ಮಾಡಲು ವಿಫಲವಾಗಿರುವ ಈ ಯಾತ್ರೆ, ನಾಡಿನ ಮತದಾರರನ್ನು ಹೇಗೆ ಪರಿವರ್ತನೆ ಮಾಡೀತು ಎನ್ನುವ ಪ್ರಶ್ನೆ ಇದೀಗ ಬಿಜೆಪಿಯ ಒಳಗೂ, ಹೊರಗೂ ಚರ್ಚೆಯ ವಿಷಯವಾಗಿದೆ. ದಿಲ್ಲಿ ವರಿಷ್ಠರ ಕೆಂಗಣ್ಣಿಗೆ ಹೆದರಿ, ತಣ್ಣಗಾಗಿದ್ದ ಯಡಿಯೂರಪ್ಪ-ಈಶ್ವರಪ್ಪ ಕದನ ಮತ್ತೆ ಭುಗಿಲೆದ್ದಿದೆ. ಚುನಾವಣೆಯಲ್ಲಿ ವಿರೋಧ ಪಕ್ಷಗಳನ್ನು ಎದುರಿಸುವ ಮೊದಲು, ಯಡಿಯೂರಪ್ಪ ತನ್ನ ಪಕ್ಷದೊಳಗಿರುವ ವಿರೋಧಿಗಳನ್ನು ಗೆಲ್ಲಲೇಬೇಕಾದಂತಹ ಅನಿವಾರ್ಯತೆಯಿದೆನ್ನುವುದನ್ನು ಈಶ್ವರಪ್ಪ ಹೇಳಿಕೆ ಎತ್ತಿ ಹಿಡಿದಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಥವಾ ಯಡಿಯೂರಪ್ಪ ಎದುರಿಸಬೇಕಾದ ಸವಾಲು ಎಷ್ಟು ಕ್ಲಿಷ್ಟಕರವಾದುದು ಎನ್ನುವುದರ ಸೂಚನೆಯನ್ನು ಇವರ ಕಣ್ಣೀರು ನೀಡಿದೆ. ಈಶ್ವರಪ್ಪ ಮತ್ತು ಯಡಿಯೂರಪ್ಪ ಪರಸ್ಪರ ವಿರೋಧಿಗಳಂತೆ ಬಡಿದಾಡುತ್ತಿದ್ದಾರಾದರೂ, ಬಿಜೆಪಿಯೊಳಗೆ ಇವರಿಬ್ಬರೂ ಸಮಾನವಾದ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಯಡಿಯೂರಪ್ಪರನ್ನು ಬಗ್ಗು ಬಡಿಯಲು ಈಶ್ವರಪ್ಪ ಹೊಂಚು ಹಾಕುತ್ತಿದ್ದರೆ, ಈಶ್ವರಪ್ಪರನ್ನು ಬಗ್ಗು ಪಡಿಯಲು ಯಡಿಯೂರಪ್ಪ ಹವಣಿಸುತ್ತಿದ್ದಾರೆ. ಇವರಿಬ್ಬರ ಬಡಿದಾಟಗಳಿಗೆ ಆರೆಸ್ಸೆಸ್ ಮೌನ ಕುಮ್ಮಕ್ಕು ನೀಡುತ್ತಿದೆ. ಇವರಿಬ್ಬರು ಬಡಿದಾಡಿ ಸುಸ್ತಾಗಿ ನೆಲಕಚ್ಚಿದಾಕ್ಷಣ ಆ ಜಾಗವನ್ನು ತುಂಬಲು ಆರೆಸ್ಸೆಸ್ ಕಾದು ಕುಳಿತಿದೆ.

ಒಂದು ರೀತಿಯಲ್ಲಿ ದಿಲ್ಲಿಯ ವರಿಷ್ಠರೇ ಈ ಇಬ್ಬರೂ ನಾಯಕರನ್ನು ಬಡಿದಾಡಿಸುತ್ತಿದ್ದಾರೆ. ಯಾಕೆಂದರೆ ಬಿಜೆಪಿಗೆ ಈ ಇಬ್ಬರು ನಾಯಕರೂ ಬೇಕಾಗಿಲ್ಲ. ಆದರೆ ಇವರನ್ನು ಕಿತ್ತು ಹಾಕುವ ಧೈರ್ಯ ಯಾರಿಗೂ ಇಲ್ಲ. ಈಶ್ವರಪ್ಪ ಹಿಂದುಳಿದ ವರ್ಗವನ್ನು ಪ್ರತಿನಿಧಿಸುತ್ತಿದ್ದಾರೆ. ಇವರ ಮೇಲೆ ಕ್ರಮ ತೆಗೆದುಕೊಂಡರೆ, ಬಿಜೆಪಿಯೊಳಗಿನ ಹಿಂದುಳಿದ ವರ್ಗ ಬಂಡಾಯ ಏಳಬಹುದು ಅಥವಾ ಬಿರುಕು ಸೃಷ್ಟಿಯಾಗಬಹುದು ಎನ್ನುವ ಭಯ ಬಿಜೆಪಿ ವರಿಷ್ಠರಿಗಿದೆ. ಯಡಿಯೂರಪ್ಪರಂತೂ ಬಿಜೆಪಿಯ ಪಾಲಿಗೆ ನುಂಗಲಾರದ ತುತ್ತು. ಕೆಜೆಪಿ ಎನ್ನುವ ಪ್ರತ್ಯೇಕ ಪಕ್ಷ ಕಟ್ಟಿ ಬಿಜೆಪಿಯ ಹೃದಯವಿದ್ರಾವಕ ಸೋಲಿಗೆ ಕಾರಣರಾಗಿದ್ದ ಯಡಿಯೂರಪ್ಪರನ್ನು ಮತ್ತೆ ಪಕ್ಷಕ್ಕೆ ಸೇರಿಸುವ ಮೂಲಕ, ಅವರ ಅನಿವಾರ್ಯತೆಯನ್ನು ನಾಯಕರು ಒಪ್ಪಿಕೊಂಡರು. ಜೊತೆಗೆ ಮತ್ತೆ ಯಡಿಯೂರಪ್ಪ ಅವರ ಕೈಗೇ ಬಿಜೆಪಿಯ ಚುಕ್ಕಾಣಿಯನ್ನು ನೀಡಬೇಕಾದ ಸ್ಥಿತಿ ನಿರ್ಮಾಣವಾಯಿತು. ಆದರೆ ಇಂದಿಗೂ ಆರೆಸ್ಸೆಸ್ ಮತ್ತು ಬಿಜೆಪಿ ಅವರನ್ನು ಒಳಗಿನಿಂದ ಸಹಿಸುತ್ತಿಲ್ಲ. ಯಡಿಯೂರಪ್ಪರ ಬೆನ್ನ ಹಿಂದಿರುವ ಲಿಂಗಾಯತ ಸಮುದಾಯದ ಬಲದ ಕಾರಣದಿಂದ ಬಿಜೆಪಿ ಬಹಿರಂಗವಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಅಂಜುತ್ತಿದೆ. ಆದುದರಿಂದಲೇ ಯಡಿಯೂರಪ್ಪ ವಿರುದ್ಧ ಈಶ್ವರಪ್ಪರನ್ನು ಮುಂದಿಟ್ಟು ಆಟವಾಡುತ್ತಿದೆ ಮತ್ತು ಆರೆಸ್ಸೆಸ್‌ನ ಮುಖಂಡರಾದ ಸಂತೋಷ್ ಆಟದ ಸೂತ್ರವನ್ನು ಕೈಗೆತ್ತಿ ಕೊಂಡಿದ್ದಾರೆ.

ಯಡಿಯೂರಪ್ಪರನ್ನು ಬಿಜೆಪಿಯಿಂದ ಕಿತ್ತೊಗೆದರೆ ಅವರು ನೇರವಾಗಿ ‘ಲಿಂಗಾಯತ ಪ್ರತ್ಯೇಕ ಧರ್ಮ’ದ ಚಳವಳಿಯಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ. ಅದು ಆರೆಸ್ಸೆಸ್‌ನ ಹಿಂದುತ್ವ ರಾಜಕೀಯದ ಮೇಲೆ ತೀವ್ರ ಪರಿಣಾಮ ಉಂಟು ಮಾಡಬಹುದು. ಆದುದರಿಂದ ಯಡಿಯೂರಪ್ಪರನ್ನು ವಿಫಲ ನಾಯಕನಾಗಿ ಬಿಂಬಿಸುವ ಅಗತ್ಯ ಬಿಜೆಪಿಗಿದೆ. ಈ ಹಿಂದೆ ಬಿಜೆಪಿ ರಾಜ್ಯದಲ್ಲಿ ಗದ್ದುಗೆಯೇರಲು ಯಡಿಯೂರಪ್ಪ ಕಾರಣರಾಗಿದ್ದರು. ಇದೇ ಸಂದರ್ಭದಲ್ಲಿ ಬಿಜೆಪಿ ಸಂಪೂರ್ಣ ಅಧಿಕಾರ ಕಳೆದುಕೊಳ್ಳಲೂ ಅವರೇ ಕಾರಣರಾಗಿದ್ದಾರೆ. ಹೀಗಿರುವಾಗ ಯಡಿಯೂರಪ್ಪರನ್ನು ಯಾವ ಕಾರಣ ಕೊಟ್ಟು ಕೆಳಗಿಳಿಸುವುದು? ಆದುದರಿಂದ ಯಡಿಯೂರಪ್ಪ ತಾನಾಗಿಯೇ ಬಿಜೆಪಿಯ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುವಂತಹ ಸನ್ನಿವೇಶವೊಂದನ್ನು ನಿರ್ಮಾಣ ಮಾಡುವುದು ಬಿಜೆಪಿ ವರಿಷ್ಠರಿಗೆ ಅನಿವಾರ್ಯವಾಗಿದೆ.

ಹಾಗಾದರೆ ಅಂತಹ ಅನಿವಾರ್ಯತೆ ಯಾವುದು? ಮುಂದಿನ ವಿಧಾನಸಭೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲುವುದು ಬಿಜೆಪಿಯ ಅದರಲ್ಲೂ ಆರೆಸ್ಸೆಸ್‌ನ ವರಿಷ್ಠರಿಗೆ ಅತ್ಯಗತ್ಯವಾಗಿದೆ. ಹಾಗೆ ಸೋತರೆ ಯಡಿಯೂರಪ್ಪ ಆ ಸೋಲಿನ ಹೊಣೆ ಹೊತ್ತು ತಾವಾಗಿಯೇ ಅಧಿಕಾರದಿಂದ ಕೆಳಗಿಳಿಯಬೇಕಾಗುತ್ತದೆ. ಇತ್ತ, ಬಿಜೆಪಿಯೊಳಗಿನ ಕಾರ್ಯಕರ್ತರಿಗೆ ಅದೊಂದು ಸಹಜ ಕ್ರಿಯೆಯಾಗಿ ಕಾಣುತ್ತದೆ. ಆ ಬಳಿಕವೂ ಬಿಜೆಪಿಯ ವಿರುದ್ಧ ಯಡಿಯೂರಪ್ಪ ಮಾತನಾಡಿದರೆ ಅದಕ್ಕೆ ಜನಬೆಂಬಲವಿರುವುದಿಲ್ಲ. ಆದುದರಿಂದ, ಈ ಬಾರಿ ಯಡಿಯೂರಪ್ಪ ತನ್ನ ಉಳಿವಿಗಾಗಿ ಬಿಜೆಪಿಯ ಜೊತೆಗೇ ಸೆಣಸಬೇಕಾಗುತ್ತದೆ. ಈಶ್ವರಪ್ಪರ ಪತ್ರಿಕಾಗೋಷ್ಠಿ ಮುಂದಿನ ದಿನಗಳಲ್ಲಿ ಬಿಜೆಪಿಯೊಳಗೆ ಭುಗಿಲೇಳಲಿರುವ ಭಿನ್ನಮತದ ಮೊದಲ ಸೂಚನೆಯಾಗಿದೆ. ಇದನ್ನು ಎದುರಿಸುವುದು ಅಷ್ಟು ಸುಲಭವೇನೂ ಇಲ್ಲ.

ಆರೆಸ್ಸೆಸ್ ಮುಖಂಡ ಸಂತೋಷ್ ಕುರಿತಂತೆ ಈಗಾಗಲೇ ಯಡಿಯೂರಪ್ಪ ತಮ್ಮ ಅಸಮಾಧಾನವನ್ನು ಹೊರಗೆಡಹಿದ್ದಾರೆ. ವರಿಷ್ಠರಿಗೂ ದೂರು ನೀಡಿದ್ದಾರೆ. ಆ ಕಾರಣದಿಂದ ಸಂತೋಷ್ ಮರೆಯಲ್ಲಿ ನಿಂತು ಕೆಲಸ ಮಾಡುತ್ತಿದ್ದಾರೆ. ಒಂದು ವೇಳೆ ಬಹಿರಂಗಕ್ಕೆ ಬಂದರೆ ಅದು ಬ್ರಾಹ್ಮಣ-ಲಿಂಗಾಯತ ತಿಕ್ಕಾಟವಾಗಿ ಪರಿವರ್ತನೆ ಹೊಂದುವ ಭಯವೂ ಆರೆಸ್ಸೆಸ್ ನಾಯಕರಲ್ಲಿದೆ. ಈ ಬಾರಿಯ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿಯನ್ನು ಸೋಲಿಸಲು ಒಂದೆಡೆ ಈಶ್ವರಪ್ಪ ತಂಡ ಮತ್ತು ಸಂತೋಷ್ ತಂಡ ಗರಿಷ್ಠ ಮಟ್ಟದಲ್ಲಿ ಶ್ರಮಿಸಲಿದೆ. ಬಿಜೆಪಿ ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ಸೋಲುವ ಮೂಲಕ, ಯಡಿಯೂರಪ್ಪ ನಾಯಕತ್ವದ ವೈಫಲ್ಯವನ್ನು ಈ ತಂಡ ವರಿಷ್ಠರಿಗೆ ಮನವರಿಕೆ ಮಾಡಲಿದೆ.

ಇದರ ಜೊತೆ ಜೊತೆಗೆ ನಿಧಾನಕ್ಕೆ ರಾಜ್ಯ ಬಿಜೆಪಿಯ ಚುಕ್ಕಾಣಿ ಸಂಪೂರ್ಣವಾಗಿ ಆರೆಸ್ಸೆಸ್ ಕೈಗೆ ಜಾರಲಿದೆ. ಬಿಜೆಪಿಯೊಳಗೆ ಯಡಿಯೂರಪ್ಪ ಯುಗ ಅಂತ್ಯವಾಗಿ, ಆರೆಸ್ಸೆಸ್ ಯುಗದ ಆರಂಭವಾಗಲಿದೆ. ಆದರೆ ಕರ್ನಾಟಕದ ಬಹುಸಂಸ್ಕೃತಿ ಮತ್ತು ಸೌಹಾರ್ದ ವೌಲ್ಯಗಳನ್ನು ವಿಫಲಗೊಳಿಸಿ ಆರೆಸ್ಸೆಸ್ ತನ್ನ ಪ್ರಾಬಲ್ಯವನ್ನು ರಾಜ್ಯಾದ್ಯಂತ ಸ್ಥಾಪಿಸುವುದು ಅಷ್ಟು ಸುಲಭವಿಲ್ಲ. ಈಗಾಗಲೇ ಕರ್ನಾಟಕಾದ್ಯಂತ ಹರಡುತ್ತಿರುವ ಬಸವ ಚಳವಳಿಯೇ ಆರೆಸ್ಸೆಸ್‌ನ ಎಲ್ಲ ತಂತ್ರಗಳನ್ನು ವಿಫಲಗೊಳಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News