ಗುಜರಾತ್: ಆತ್ಮಹತ್ಯೆಗೆ ಯತ್ನಿಸಿದ್ದ ದಲಿತ ಹೋರಾಟಗಾರ ಮೃತ್ಯು

Update: 2018-02-17 05:13 GMT

ಅಹ್ಮದಾಬಾದ್, ಫೆ. 17: ದಲಿತ ಕುಟುಂಬಕ್ಕೆ ಭೂಮಿ ಹಂಚಿಕೆಯಲ್ಲಿ ಆಗಿರುವ ವಿಳಂಬವನ್ನು ಖಂಡಿಸಿ ಪಠಾಣ್ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ಬೆಂಕಿ ಹಚ್ಚಿಕೊಂಡಿದ್ದ ದಲಿತ ಹೋರಾಟಗಾರ ಭಾನುಭಾಯ್ ವಂಕರ್ ಶುಕ್ರವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 

ಈ ಆತ್ಮಾಹುತಿ ಯತ್ನದ ಬಗ್ಗೆ ತನಿಖೆ ನಡೆಸುವಂತೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ಶುಕ್ರವಾರ ಆದೇಶಿಸಿದ್ದರು. ಶೇಕಡ 80ರಷ್ಟು ಸುಟ್ಟ ಗಾಯಗಳಾಗಿದ್ದ ಭಾನುಭಾಯ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟರು ಎಂದು ರಾಷ್ಟ್ರೀಯ ದಲಿತ ಅಧಿಕಾರ ಮಂಚ್ ಸಂಚಾಲಕ ಸುಬೋಧ್ ಪರ್ಮರ್ ಹೇಳಿದ್ದಾರೆ.

ಮೆಹ್ಸಾನಾ ಜಿಲ್ಲೆಯ ಉಂಝಾ ಪಟ್ಟಣದ ನಿವಾಸಿಯಾಗಿದ್ದ ಭಾನುಭಾಯ್, ಶಾಸಕ ಜಿಗ್ನೇಶ್ ಮೇವಾನಿ ನೇತೃತ್ವದ ರಾಷ್ಟ್ರೀಯ ದಲಿತ ಅಧಿಕಾರ ಮಂಚ್‌ನ ಸಕ್ರಿಯ ಹೋರಾಟಗಾರರಾಗಿದ್ದರು.

ಜಿಲ್ಲಾಧಿಕಾರಿ ಕಚೇರಿ ಮುಂದೆ ಬೆಂಕಿ ಹಚ್ಚಿಕೊಂಡಿದ್ದ ಭಾನುಭಾಯ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಕರಣದ ಬಗ್ಗೆ ಮುಖ್ಯ ಕಾರ್ಯದರ್ಶಿ ಜೆ.ಎನ್.ಸಿಂಗ್ ತನಿಖೆ ಕೈಗೊಂಡು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಶುಕ್ರವಾರ ಹೇಳಿಕೆ ನೀಡಿದ್ದರು.

ಪಠಾಣ್ ಜಿಲ್ಲೆಯ ಸಮಿ ತಾಲೂಕು ದುಡ್ಖಾ ಗ್ರಾಮದ ದಲಿತ ಕುಟುಂಬವೊಂದಕ್ಕೆ ಜಮೀನು ದೊರಕಿಸಿಕೊಡುವ ಸಲುವಾಗಿ ಭಾನುಭಾಯ್ ಹೋರಾಟ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News