2013ರ ಗಲಭೆಯಿಂದ ಕಂಗೆಟ್ಟಿದ್ದ ಮುಝಫ್ಫರ್ ನಗರದಲ್ಲಿ ಪರಿವರ್ತನೆಯ ಗಾಳಿ

Update: 2018-02-17 08:12 GMT

ಮುಝಫ್ಫರ್ ನಗರ, ಫೆ.17: ಉತ್ತರ ಪ್ರದೇಶದ ಮುಝಫ್ಫರ್ ನಗರದಲ್ಲಿ 2013ರಲ್ಲಿ ನಡೆದ ಹಿಂಸಾಚಾರದಲ್ಲಿ 63 ಜನರು ಬಲಿಯಾಗಿದ್ದರೆ, 50,000ಕ್ಕೂ ಹೆಚ್ಚು ಜನರು ತಮ್ಮ ಮನೆ-ಮಠಗಳನ್ನು ಕಳೆದುಕೊಂಡಿದ್ದರು. ಜಿಲ್ಲೆಯ ಹಿಂದೂಗಳು ಮತ್ತು ಮುಸಲ್ಮಾನರು ತಾವು ಒಂದೇ ತಾಯಿಯ ಮಕ್ಕಳು ಎಂಬುದನ್ನು ಮರೆತು ಪರಸ್ಪರ ರಕ್ತ ಹೀರಲು ಆ ದಿನಗಳಲ್ಲಿ ಕಾಯುತ್ತಿದ್ದರು. ನೂರಾರು ಮತೀಯ ಹಿಂಸಾಚಾರ ಪ್ರಕರಣಗಳೂ ಎರಡೂ ಸಮುದಾಯದ ಮಂದಿಯ ವಿರುದ್ಧ ದಾಖಲಾಗಿದ್ದವು. ಆದರೆ ಇದೀಗ ಈ ಸ್ಥಳ ಸಂಪೂರ್ಣವಾಗಿ ಪರಿವರ್ತನೆಗೊಂಡಿದೆ. ಶಾಂತಿ ಸಮಿತಿಗಳು ಮುಝಫ್ಫರ್ ನಗರ ಕಳೆದುಕೊಂಡಿದ್ದ ಶಾಂತಿಯನ್ನು ಮರಳಿ ಪಡೆಯಲು ಸತತ ಶ್ರಮಿಸುತ್ತಿವೆ.

ಈ ಶಾಂತಿ ಹಾಗೂ ಏಕತೆಯ ಸಭೆಗಳ ನಂತರ ಮುಸ್ಲಿಮರು ಹಾಗು ಹಿಂದೂಗಳು ಒಂದಾಗಿ ಪ್ರಾರ್ಥಿಸುತ್ತಾರೆ. ಹಿಂದಿನ ಕಹಿ ನೆನಪುಗಳನ್ನು ಅಳಿಸಿ ಹಾಕಲು ಎರಡೂ ಸಮುದಾಯಗಳ ಕಾರ್ಯಕರ್ತರು ಶ್ರಮ ಮೀರಿ ಪ್ರಯತ್ನಿಸುತ್ತಿದ್ದಾರೆ.

"ನಮಗೆ ಜಗಳವಾಡಿ ಸಾಕಾಗಿ ಹೋಗಿದೆ'' ಎಂದು ಅಜಿತ್ ಸಿಂಗ್ ಎಂಬ ಕಾರ್ಯಕರ್ತರು ಆಯೋಜಿಸಿದ್ದ ಸಭೆ ಮುಗಿಸಿ ಹೊರಬರುತ್ತಿದ್ದ ಮುಹಮ್ಮದ್ ಹಸನ್ ಎಂಬವರು ಹೇಳಿದರು. "ಗಲಭೆಗಳಲ್ಲಿ ನಾನು ನನ್ನ ತಾಯಿಯನ್ನು ಕಳೆದುಕೊಂಡೆ. ಹಿಂಸೆಯಿಂದ ಏನನ್ನು ಸಾಧಿಸಿದಂತಾಗಿದೆ?, ಮುಗ್ಧ ಜೀವಗಳು ಬಲಿಯಾದವು. ಮನೆಗಳು, ಉದ್ಯೋಗ ಹಾಗೂ ಸೌಹಾರ್ದತೆಯೂ ಹೋಯಿತು. ಈಗ ಎಲ್ಲರಿಗೂ ಜ್ಞಾನೋದಯವಾಗಿದೆ ಎಂದು ಅನಿಸುತ್ತದೆ'' ಎಂದು ಹಸನ್ ಹೇಳುತ್ತಾರೆ.

"ಈ ಕೆಲವು ವರ್ಷಗಳು ಬಲು ಕಷ್ಟಕರವಾಗಿದ್ದವು.  ನಮ್ಮ ಬುಡವೇ ಅಲುಗಾಡಿತ್ತು. ನಮ್ಮ ಅನೇಕ ಸಂಬಂಧಿಗಳು ಹತ್ಯೆಗೀಡಾಗಿದ್ದರು. ಆದರೆ ಈ ದಂಗೆಯಿಂದ ಕೊನೆಗೆ ರಾಜಕಾರಣಿಗಳು ಮಾತ್ರ  ಲಾಭ ಗಳಿಸಿದ್ದಾರೆ. ನಾವು ತಳ ಮಟ್ಟದ ಜನರು ನಮ್ಮ ಜೀವನ ನಿರ್ವಹಣೆಗೆ ಕಷ್ಟ ಪಡುವವರು. ಧರ್ಮಗಳ ನಡುವಿನ ದ್ವೇಷಕ್ಕೆ ಈಗ ಯಾರಿಗೆ ಸಮಯವಿದೆ?, ಈಗ ಯಾರಾದರೂ ಎರಡೂ ಸಮದಾಯಗಳ ನಡುವೆ ಶಾಂತಿ ಸ್ಥಾಪಿಸಲು ಯತ್ನಿಸುತ್ತಿದ್ದರೆ ಅದು ಉತ್ತಮ ಬೆಳವಣಿಗೆ'' ಎಂದು ದಂಗೆಗಳಿಂದ ಬಾಧಿತರಾಗಿರುವ ಯಾಕೂಬ್ ಅಹಮದ್ ಹೇಳುತ್ತಾರೆ.

"ದಂಗೆಗಳ ನಂತರ ಬಹಳಷ್ಟು ಸಮಸ್ಯೆಗಳು ಎದುರಾಗಿದ್ದವು. ಎಲ್ಲರೂ ನಷ್ಟ ಅನುಭವಿಸಿದ್ದರು, ಮುಝಫ್ಫರ್ ನಗರ ತನ್ನ ಇತಿಹಾಸವನ್ನು ತಾನೇ ಬದಲಾಯಿಸಬೇಕಿದೆ'' ಎಂದು ಜಾಟ್ ಸಂಘರ್ಷ್ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ವಿಪಿನ್ ಬಾಲನ್ ಹೇಳಿದ್ದಾರೆ.

ಮುಝಫ್ಫರ್ ನಗರದಲ್ಲಿ ಫೆಬ್ರವರಿ 19 ಹಾಗೂ ಮಾರ್ಚ್ ತಿಂಗಳಲ್ಲಿ ಇನ್ನೆರಡು ಶಾಂತಿ ಸಭೆಗಳು ನಡೆಯಲಿವೆ ಎಂದು ಆರ್‍ಎಲ್‍ಡಿ ವಕ್ತಾರ ಅಭಿಷೇಕ್ ಗುರ್ಜರ್ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News