ಕೇಂದ್ರ ಸಚಿವ ಹೆಗಡೆ ಹೇಳಿಕೆಗೆ ಬಿಜೆಪಿ ವಿರೋಧ!

Update: 2018-02-18 09:25 GMT

ಬೆಂಗಳೂರು, ಫೆ.18: ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಕನ್ನಡ ಭಾಷೆಯ ವಿಷಯಕ್ಕೆ ಸಂಬಂಧಿಸಿ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಅವರ ಪಕ್ಷವೇ ವಿರೋಧ ವ್ಯಕ್ತಪಡಿಸಿದ್ದು, ಜವಾಬ್ದಾರಿ ಸ್ಥಾನದಲ್ಲಿರುವವರು ಇಂತಹ ಹೇಳಿಕೆ ನೀಡಬಾರದು ಎಂದು ಬುದ್ದಿಮಾತು ಹೇಳಿದೆ.

 ‘‘ಹೆಗಡೆ ತನ್ನ ಮಾತನ್ನು ವಾಪಸ್ ಪಡೆಯಬೇಕು. ಅವರು ಹೀಯಾಳಿಸುವ ರೀತಿಯ ಹೇಳಿಕೆ ನೀಡಿದ್ದಾರೆ. ಅವರ ಮಾತು ಯಾರೂ ಒಪ್ಪುವಂತದ್ದಲ್ಲ. ಅವರ ಮಾತಿಂದ ಎಲ್ಲರಿಗೂ ನೋವಾಗಿದೆ. ಕೇಂದ್ರ ಸಚಿವರಾಗಿ ಎಚ್ಚರಿಕೆ, ಜವಾಬ್ದಾರಿಯಿಂದ ಮಾತನಾಡಬೇಕು’’ ಎಂದು ಬಿಜೆಪಿ ವಕ್ತಾರ ಸುರೇಶ್ ಕುಮಾರ್ ಹೇಳಿದ್ದಾರೆ.

ಪುತ್ತೂರಿನ ಕಾರ್ಯಕ್ರಮವೊಂದರಲ್ಲಿ ಇತ್ತೀಚೆಗೆ ಮಾತನಾಡುತ್ತಿದ್ದ ಹೆಗಡೆ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಜನರು ಮಾತ್ರ ಶುದ್ಧ ಕನ್ನಡ ಮಾತನಾಡುತ್ತಾರೆ. ಉಳಿದವರಿಗೆ ಶುದ್ಧ ಕನ್ನಡ ಮಾತನಾಡುವ ಯೋಗ್ಯತೆಯಿಲ್ಲ ಎಂದು ಹೇಳಿಕೆ ನೀಡಿದ್ದರು.

 ಅನಂತಕುಮಾರ್ ಈ ಹಿಂದೆಯೂ ಹಲವು ಬಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಂವಿಧಾನವನ್ನು ಬದಲಿಸಬೇಕೆಂಬ ಮಾತನ್ನು ಆಡಿದ್ದ ಅವರು ಪ್ರತಿಪಕ್ಷಗಳ ಪ್ರತಿಭಟನೆಯ ಬಳಿಕ ಸಂಸತ್ತಿನಲ್ಲಿ ಕ್ಷಮೆಯಾಚಿಸಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News