66 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ

Update: 2018-02-18 16:04 GMT

ಟೆಹ್ರಾನ್, ಫೆ.18: ಏಸ್ಮನ್ ಏರ್‌ಲೈನ್ಸ್ ಸಂಸ್ಥೆಯ ವಿಮಾನವು ಇರಾನ್‌ನ ಝಾಗ್ರೊಸ್ ಪರ್ವತಶ್ರೇಣಿಗೆ ಅಪ್ಪಳಿಸಿದ ಪರಿಣಾಮ ಅದರಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ 66 ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ರವಿವಾರ ಸಂಭವಿಸಿದೆ.

ವಿಮಾನವು ಮೆಹ್ರಾಬಾದ್ ವಿಮಾನ ನಿಲ್ದಾಣದಿಂದ ಯಸುಜಿ ನಗರಕ್ಕೆ ಪ್ರಯಾಣಿಸುತ್ತಿತ್ತು ಎಂದು ವೈಮಾನಿಕ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಮುಖ್ಯಸ್ಥ ಮುಹಮ್ಮದ್ ತಬತಬಯಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆಕಾಶಕ್ಕೆ ಹಾರಿದ 45 ನಿಮಿಷಗಳ ನಂತರ ವಿಮಾನವು ರಾಡರ್‌ನಿಂದ ಏಕಾಏಕಿ ಕಣ್ಮರೆಯಾಗಿದೆ ಎಂದವರು ತಿಳಿಸಿದ್ದಾರೆ. ವಿಮಾನ ಅಪಘಾತಕ್ಕೀಡಾಗಿರುವ ಸ್ಥಳದ ನಿಖರ ಮಾಹಿತಿಯನ್ನು ರಕ್ಷಣಾ ಪಡೆಗಳು ಇನ್ನಷ್ಟೇ ತಿಳಿಯಬೇಕಿದೆ.

ವಿಮಾನದಲ್ಲಿ ಒಂದು ಮಗುವೂ ಸೇರಿದಂತೆ 60 ಪ್ರಯಾಣಿಕರಿದ್ದರು ಮತ್ತು ಆರು ಮಂದಿ ಸಿಬ್ಬಂದಿಯಿದ್ದರು ಎಂದು ತಬತಬಯಿ ತಿಳಿಸಿದ್ದಾರೆ. ಸದ್ಯ ರಕ್ಷಣಾ ತಂಡ ವಿಮಾನ ಅಪಘಾತಕ್ಕೀಡಾದ ಪ್ರದೇಶವನ್ನು ಪತ್ತೆ ಮಾಡುವ ಕಾರ್ಯದಲ್ಲಿ ತೊಡಗಿರುವುದರಿಂದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ ಪ್ರಯಾಣಿಕರು ಸಾವನ್ನಪ್ಪಿದ್ದಾರೆಯೇ ಎಂಬ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ರಕ್ಷಣಾ ಮತ್ತು ಪರಿಹಾರ ತಂಡವನ್ನು ಅಪಘಾತ ನಡೆದ ಪ್ರದೇಶಕ್ಕೆ ರವಾನಿಸಲಾಗಿದ್ದರೂ ಹಿಮಪಾತದಿಂದಾಗಿ ಹೆಲಿಕಾಪ್ಟರ್‌ಗಳಿಗೆ ಹಾರಲು ಸಾಧ್ಯವಾಗುತ್ತಿಲ್ಲ ಎಂದು ಇರಾನ್‌ನ ತುರ್ತು ಸೇವೆಗಳ ಪ್ರಾದೇಶಿಕ ಮುಖ್ಯಸ್ಥ ಜಲಾಲ್ ಪೂರನ್ಫರ್ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಐದು ರಕ್ಷಣಾ ಮತ್ತು ಪರಿಹಾರ ತಂಡಗಳನ್ನು ರವಾನಿಸಲಾಗಿದೆ ಎಂದವರು ತಿಳಿಸಿದ್ದಾರೆ. ಇರಾನ್‌ನ ರೆಡ್ ಕ್ರಸೆಂಟ್ ಸಂಸ್ಥೆಯ ಪರಿಹಾರ ಮತ್ತು ರಕ್ಷಣಾ ವಿಭಾಗವು ತನ್ನ 12 ತಂಡಗಳನ್ನು ಅಪಘಾತ ಸ್ಥಳಕ್ಕೆ ಕಳುಹಿಸಿರುವುದಾಗಿ ಹೇಳಿಕೊಂಡಿದೆ.

ಎಸ್ಮನ್ ವೈಮಾನಿಕ ಸಂಸ್ಥೆಯ ಬಳಿ 36 ವಿಮಾನಗಳಿದ್ದು ಇವುಗಳ ಪೈಕಿ ಕನಿಷ್ಟ ಮೂರು ವಿಮಾನಗಳು 1990ರಲ್ಲಿ ಖರೀದಿಸಿದ್ದಾಗಿದೆ ಎಂದು ತಿಳಿದುಬಂದಿರುವುದಾಗಿ ವರದಿಗಳು ತಿಳಿಸಿವೆ. ಇರಾನ್‌ನ ವೈಮಾನಿಕ ಸಂಸ್ಥೆಗಳ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದಶಕಗಳ ಕಾಲ ಇದ್ದ ನಿರ್ಬಂಧದಿಂದಾಗಿ ಅಲ್ಲಿ ಕಾರ್ಯಾಚರಿಸದೆ ಉಳಿದಿದ್ದ ವಿಮಾನಗಳ ನಿರ್ವಹಣೆಯು ದೊಡ್ಡ ಸವಾಲಾಗಿತ್ತು. ಈ ವಿಮಾನಗಳಿಗೆ ಆಯಸ್ಸು ಕೂಡಾ ಹೆಚ್ಚಾಗಿತ್ತು ಎಂದು ವರದಿಗಳು ತಿಳಿಸಿವೆ.

ಏಸ್ಮನ್ ಸಂಸ್ಥೆಯ ಬೋಯಿಂಗ್ 727-200 ವಿಮಾನಗಳು ದೇಶದ 1979ರ ಇಸ್ಲಾಮಿಕ್ ಕ್ರಾಂತಿಯ ಸಮಯಕ್ಕೆ ಸೇರಿದ್ದಾಗಿವೆ. ಈ ವಿಮಾನಗಳು ಇಸ್ಲಾಮಿಕ್ ಕ್ರಾಂತಿ ನಡೆದ ಮುಂದಿನ ವರ್ಷ ತಮ್ಮ ಮೊದಲ ಹಾರಾಟ ನಡೆಸಿದ್ದವು.

2015ರಲ್ಲಿ ಇರಾನ್ ಜಗತ್ತಿನ ಇತರ ದೇಶಗಳೊಂದಿಗೆ ಸಹಿ ಹಾಕಿದ ಅಣು ಒಪ್ಪಂದದ ಸಂದರ್ಭದಲ್ಲಿ ವೈಮಾನಿಕ ನಿರ್ಬಂಧವನ್ನು ತೆಗೆದುಹಾಕುವ ಷರತ್ತು ಪ್ರಮುಖವಾಗಿತ್ತು. ಈ ಒಪ್ಪಂದದ ಹಿನ್ನೆಲೆಯಲ್ಲಿ ಏಸ್ಮನ್ ಸಂಸ್ಥೆಯು ಮೂರು ಬಿಲಿಯನ್ ಡಾಲರ್ ವೆಚ್ಚದಲ್ಲಿ 30 ಬೋಯಿಂಗ್ 737 ಮ್ಯಾಕ್ಸ್ ಜೆಟ್‌ಗಳನ್ನು ಖರೀದಿಸುವ ಒಪ್ಪಂದ ಮಾಡಿಕೊಂಡಿತ್ತು.

ಅಪಘಾತಕ್ಕೆ ಕಾರಣಗಳು:

ಏಸ್ಮನ್ ವೈಮಾನಿಕ ಸಂಸ್ಥೆಯು ವಿಮಾನವು ಯಾವುದೇ ರೀತಿಯ ತಾಂತ್ರಿಕ ವೈಫಲ್ಯಕ್ಕೆ ಒಳಗಾಗಿರುವುದನ್ನು ಅಲ್ಲಗಳೆದಿದೆ. ಹವಾಮಾನ ವೈಪರಿತ್ಯವೇ ಈ ಘಟನೆಗೆ ಕಾರಣ ಎಂದು ಸಂಸ್ಥೆ ತಿಳಿಸಿದೆ. ಆದರೆ ಮಾಧ್ಯಗಳು ಮಾತ್ರ ವಿಮಾನದಲ್ಲಿ ತಾಂತ್ರಿಕ ವೈಫಲ್ಯ ತಲೆದೋರಿತ್ತು ಎಂದು ವರದಿ ಮಾಡಿವೆ.

ಪರ್ವತಶ್ರೇಣಿಯಲ್ಲಿ ಅವ್ಯಾಹತವಾಗಿದ್ದ ಹಿಮಪಾತ ಮತ್ತು ದಟ್ಟನೆ ಹಿಮ ಆವರಿಸಿದ್ದ ಪರಿಣಾಮವಾಗಿ ಪೈಲಟ್ ತನ್ನ ಗುರಿಯತ್ತ ವಿಮಾನವನ್ನು ನಿಧಾನವಾಗಿ ಇಳಿಸುವ ಸಂದರ್ಭದಲ್ಲಿ ಪರ್ವತಕ್ಕೆ ಡಿಕ್ಕಿಯಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News