ಲಿಂಗಾನುಪಾತ ಇಳಿಕೆಗೆ ಯಾರು ಹೊಣೆ?

Update: 2018-02-18 18:47 GMT

ಬೇರೆ ಬೇರೆ ಕ್ಷೇತ್ರಗಳ ಸಾಧನೆಗಳ ಕುರಿತಂತೆ ಇತ್ತೀಚೆಗೆ ಬಿಡುಗಡೆಯಾಗುತ್ತಿರುವ ವರದಿಗಳು ದೇಶದ ಆತಂಕವನ್ನು ಹೆಚ್ಚಿಸುತ್ತಿದೆ. ಇದೀಗ ಆ ಸಾಲಿಗೆ ಲಿಂಗಾನುಪಾತದ ಕುರಿತಂತೆ ಇರುವ ವರದಿಯೂ ಸೇರ್ಪಡೆಯಾಗಿದೆ.. ಪ್ರಧಾನಿ ನರೇಂದ್ರ ಮೋದಿಯವರ ‘ಬೇಟಿ ಬಚಾವೋ’ ಘೋಷಣೆಗೆ ಸವಾಲು ಹಾಕುವಂತೆ ದೇಶದ 21 ಅತೀ ದೊಡ್ಡ ರಾಜ್ಯಗಳ ಪೈಕಿ 17 ರಾಜ್ಯಗಳಲ್ಲಿ ಅಪಾಯಕಾರಿ ಮಟ್ಟದಲ್ಲಿ ಲಿಂಗಾನುಪಾತ ಇಳಿಕೆಯಾಗುತ್ತಿದೆ. ವಿಪರ್ಯಾಸವೆಂದರೆ ಮೋದಿಯವರ ತವರಾಗಿರುವ ಗುಜರಾತ್‌ನಲ್ಲಿ ಈ ಅನುಪಾತ ದಿಗಿಲು ಹುಟ್ಟಿಸುವಷ್ಟು ಅಂದರೆ 53 ಅಂಕದಷ್ಟು ಇಳಿಕೆಯಾಗಿದೆ ಎಂದು ನೀತಿ ಆಯೋಗ ಬಿಡುಗಡೆ ಮಾಡಿದ ವರದಿ ಹೇಳುತ್ತಿದೆ. ಇದನ್ನು ವಿರೋಧ ಪಕ್ಷಗಳ ಸುಳ್ಳು ಆರೋಪ ಎಂದು ಪ್ರಧಾನಿ ಮೋದಿ ಝಾಡಿಸಿ ಬಿಡುವಂತಿಲ್ಲ. ಯಾಕೆಂದರೆ ಸ್ವತಃ ಸರಕಾರವೇ ಬಹಿರಂಗಪಡಿಸಿದ ಅಂಕಿಅಂಶ ಇದಾಗಿದೆ.

17 ರಾಜ್ಯಗಳಲ್ಲಿ ಗಣನೀಯ 10 ಅಥವಾ ಅದಕ್ಕಿಂತ ಹೆಚ್ಚು ಇಳಿಕೆ ದಾಖಲಾಗಿದೆ. ಈ ಸೂಚ್ಯಂಕದಲ್ಲಿ 2012-14ರಿಂದ 2013-15ರವರೆಗೆ ಗುಜರಾತ್‌ನಲ್ಲಿ 1000 ಪುರುಷರಿಗೆ 907 ಮಹಿಳೆಯರು ಇರಬೇಕಾಗಿತ್ತು. ಆದರೆ ಅದಕ್ಕೆ ಬದಲಾಗಿದೆ 854 ಮಹಿಳೆಯರು ಮಾತ್ರ ಇದ್ದಾರೆ. ಅಂದರೆ ಶೇ. 53ರಷ್ಟು ಅಂಕ ಇಳಿಕೆಯಾಗಿದೆ ಎಂದಾಯಿತು. ಒಬ್ಬ ಮುಖ್ಯಮಂತ್ರಿಯಾಗಿ ತನ್ನ ರಾಜ್ಯದಲ್ಲಿಯೇ ಬೇಟಿ ಬಚಾವೋ ಯೋಜನೆಯಲ್ಲಿ ವಿಫಲರಾಗಿರುವ ನರೇಂದ್ರ ಮೋದಿ ಇಡೀ ದೇಶದ ಹೆಣ್ಣು ಮಕ್ಕಳನ್ನು ಉಳಿಸುವಲ್ಲಿ ಹೇಗೆ ಯಶಸ್ವಿಯಾದಾರು ಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿದೆ. ಗುಜರಾತ್‌ನ ಆನಂತರದ ಸ್ಥಾನವನ್ನು ಹರ್ಯಾಣ ಪಡೆದುಕೊಂಡಿದೆ. ಇದಾದ ಬಳಿಕ ರಾಜಸ್ಥಾನ, ಉತ್ತರಾಖಂಡ, ಮಹಾರಾಷ್ಟ್ರ ಸರದಿಯಲ್ಲಿ ನಿಲ್ಲುತ್ತವೆೆ. ಗುಜರಾತ್‌ಗೆ ಹೋಲಿಸಿದರೆ ಕರ್ನಾಟಕದ ಸ್ಥಿತಿ ತೀರಾ ಗಂಭೀರವಾಗಿಲ್ಲ. ಆದರೆ 11 ಅಂಕಿ ಇಳಿಕೆಯಾಗಿದೆ ಎನ್ನುವುದು ಸಣ್ಣ ಅಪಾಯವಂತೂ ಅಲ್ಲ. ಇದೇ ಸಂದರ್ಭದಲ್ಲಿ ಪಂಜಾಬ್‌ನಲ್ಲಿ ಶೇ. 19 ಅಂಕ ಏರಿಕೆಯಾಗಿರುವುದು ಶ್ಲಾಘನೀಯವಾಗಿದೆ.

ಸಾಧಾರಣವಾಗಿ ಇಂತಹ ಲಿಂಗಾನುಪಾತ ಇಳಿಕೆಯ ಕಾರಣಗದ ಹಿಂದೆ ಉಳಿದ ಸಾಮಾಜಿಕ ಅಂಶಗಳೂ ಸುತ್ತಿಕೊಳ್ಳುತ್ತವೆ. ಮೇಲ್ನೋಟಕ್ಕೆ ನೋಡಿದರೆ ಈ ಇಳಿಕೆಗಳು ಸಂಭವಿಸಿರುವುದು ಮೇಲ್ಜಾತಿ ಪ್ರಾಬಲ್ಯವಿರುವ ಗುಜರಾತ್, ರಾಜಸ್ಥಾನ, ಹರ್ಯಾಣದಂತಹ ರಾಜ್ಯಗಳಲ್ಲಿ. ಎಲ್ಲೆಲ್ಲ ಅನಕ್ಷರತೆ ಮತ್ತು ಬಡತನ ಹೆಚ್ಚಿದೆಯೋ ಅಲ್ಲಿ ಇಂತಹ ಇಳಿಕೆಗಳು ಹೆಚ್ಚು ಕಂಡು ಬಂದಿವೆ. ಹೆಣ್ಣಿನ ಕೊರತೆಯಿಂದ ಸಮಾಜ ಬಹು ಪತಿತ್ವದ ಮೊರೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜಸ್ಥಾನದ ಕೆಲವೆಡೆ ಒಂದೇ ಹೆಣ್ಣನ್ನು ಸೋದರರು ಹಂಚಿಕೊಂಡ ಉದಾಹರಣೆಗಳು ಮಾಧ್ಯಮಗಳಲ್ಲಿ ಈಗಾಗಲೇ ವರದಿಯಾಗಿವೆ. ಹೆಣ್ಣಿನ ಕೊರತೆ ಮಹಿಳೆಯ ಕುರಿತ ಮಹತ್ವವನ್ನು ಇವರಲ್ಲಿ ಹೆಚ್ಚು ಮಾಡಿಲ್ಲ. ಬದಲಿಗೆ ಅವಳನ್ನು ಇನ್ನಷ್ಟು ಹೆಚ್ಚು ಶೋಷಿಸುವ ಕೆಲಸವೇ ಈ ಭಾಗದಲ್ಲಿ ನಡೆಯುತ್ತಿದೆ. ಒಂದೆಡೆ ಧರ್ಮ, ಕಂದಾಚಾರ, ವೌಢ್ಯಗಳೂ ಈ ಲಿಂಗಾನುಪಾತದ ಇಳಿಕೆಗೆ ಮುಖ್ಯ ಕಾರಣವಾಗುತ್ತಿದೆ. ದಕ್ಷಿಣ ಭಾರತದಲ್ಲೂ ಇದರ ಪರಿಣಾಮ ಕಾಣಿಸಿಕೊಳ್ಳುತ್ತಿದೆ. ಒಂದೆಡೆ ಪುರುಷರಿಗೆ ಮದುವೆಯಾಗಲು ಹೆಣ್ಣುಗಳೇ ದೊರಕುತ್ತಿಲ್ಲ. ಇದಕ್ಕೆ ಒಂದು ಕಾರಣ, ಜಾತಿಯೂ ಆಗಿದೆ.

ತಮ್ಮದೇ ಜಾತಿಯೊಳಗೆ ಹುಡುಗಿಯರ ಕೊರತೆ ಕಾಣಿಸಿಕೊಂಡಾಗ ಉತ್ತರ ಭಾರತದಿಂದ ಮಹಿಳೆಯರನ್ನು ತರಿಸಿ, ಅವರನ್ನು ಶುದ್ಧೀಕರಿಸಿ ಮದುವೆಯಾಗುವ ಅನಿವಾರ್ಯ ಕೆಲವರದು. ಇದೇ ಸಂದರ್ಭದಲ್ಲಿ ಈ ಲಿಂಗಾನುಪಾತಕ್ಕೆ ಮುಖ್ಯ ಕಾರಣ ಏನು? ಅದನ್ನು ನಿವಾರಿಸುವ ಬಗೆ ಹೇಗೆ ಎಂದು ಯಾರೂ ಆಲೋಚಿಸುತ್ತಿಲ್ಲ. ಸಾಧಾರಣವಾಗಿ ಹೆಣ್ಣು ಭ್ರೂಣಗಳ ನಾಶ ಹಳ್ಳಿಗಳಲ್ಲಿ ಅತಿಯಾಗಿರುತ್ತದೆ ಮತ್ತು ಅದಕ್ಕೆ ಕಾರಣ ಅವರ ಅನಕ್ಷರತೆ ಎನ್ನುವ ವಾದವೊಂದಿದೆ. ಆದರೆ ಹಳ್ಳಿಗಳಲ್ಲಿ ಅನಕ್ಷರತೆ ಇರಬಹುದು. ಗರ್ಭಪಾತ ಗ್ರಾಮೀಣ ಪ್ರದೇಶದ ನಂಬಿಕೆಗೆ ವಿರುದ್ಧವಾದುದಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಹುಟ್ಟಿದ ಮಗು ಹೆಣ್ಣೋ, ಗಂಡೋ ಎಂದು ಪರೀಕ್ಷಿಸುವ ತಂತ್ರಜ್ಞಾನ ಗ್ರಾಮೀಣ ಪ್ರದೇಶಗಳಲ್ಲಿ ಇಲ್ಲ. ಅದು ಇರುವುದೇ ನಗರ ಪ್ರದೇಶಗಳಲ್ಲಿ. ವಿದ್ಯಾವಂತರೇ ಅದನ್ನು ಹೆಚ್ಚು ಬಳಸುತ್ತಿರುವುದು. ಜೊತೆಗೆ ಅದಕ್ಕೆ ಸಹಕರಿಸುವ ವೈದ್ಯರೂ ವಿದ್ಯಾವಂತರೇ. ಅವರ ಪಾಲಿಗೆ ಇದು ಹಣ ಮಾಡುವ ದಂಧೆಯಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಮಕ್ಕಳ ಇಳಿಕೆಯಾಗಲು ಮುಖ್ಯ ಕಾರಣ ಭ್ರೂಣ ಹತ್ಯೆಯಲ್ಲ. ಬಡತನ, ಹಸಿವು, ಅಪೌಷ್ಟಿಕತೆ ಇವುಗಳ ಮೊದಲ ಬಲಿಪಶು ಮಹಿಳೆ ಎನ್ನುವ ಅಂಶವನ್ನು ನಾವು ಗಮನಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಹೆರಿಗೆಯ ಸಂದರ್ಭದಲ್ಲಿ ಸಾಯುವ ಮಹಿಳೆಯರ ಸಂಖ್ಯೆ ಹೆಚ್ಚು. ಇಂದಿಗೂ ಆಸ್ಪತ್ರೆಗಳ ಸಹಾಯವಿಲ್ಲದೆ, ಹಳ್ಳಿಯ ಸೂಲಗಿತ್ತಿಯ ಸಹಾಯದಿಂದ ಇಲ್ಲಿ ಹೆರಿಗೆ ನಡೆಯುತ್ತದೆ. ಇಂತಹ ಸಮಯದಲ್ಲಿ ಮಹಿಳೆಯರಿಗೆ ಪ್ರಾಣಾಪಾಯ ಅಧಿಕ. ಹೀಗೆ ಮಹಿಳೆಯರು ಮೃತಪಟ್ಟರೆ, ಪುರುಷರು ಮರು ವಿವಾಹವಾಗಬೇಕಾಗುತ್ತದೆ. ಇದೇ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಮನೆಗೆಲಸವಲ್ಲದೆ ಹೊರಗಿನ ದುಡಿಮೆಯನ್ನೂ ಮಾಡಬೇಕಾಗುತ್ತದೆ. ಅಪೌಷ್ಟಿಕತೆ, ಹೆಚ್ಚಿನ ಶ್ರಮ ಇವೆಲ್ಲವೂ ಮಹಿಳೆಯರ ಆಯಸ್ಸನ್ನು ಕುಗ್ಗಿಸುತ್ತಿವೆ.

ಸಣ್ಣ ಪ್ರಾಯದಲ್ಲೇ ಮಹಿಳೆಯರು ಸಾಯುವುದರಿಂದ ಮಹಿಳೆಯರ ಸಂಖ್ಯೆ ಇಳಿಮುಖವಾಗುತ್ತಿದೆ. ಜಾಹೀರಾತಿಗೆ ಹಣ ಹೂಡಿಕೆ ಮಾಡಿದಾಕ್ಷಣ ‘ಬೇಟಿ ಬಚಾವೋ’ ಯಶಸ್ವಿಯಾಗಲಾರದು. ಬರೇ ಭ್ರೂಣ ಹತ್ಯೆ ತಡೆಯಿಂದ ಮಾತ್ರ ಇದನ್ನು ಯಶಸ್ವಿಗೊಳಿಸಲೂ ಸಾಧ್ಯವಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರ ಬದುಕು ಉತ್ತಮಗೊಳ್ಳಬೇಕು. ಮುಖ್ಯವಾಗಿ ಹೆರಿಗೆಯ ಸಂದರ್ಭದಲ್ಲಿ ಅವರಿಗೆ ಆಸ್ಪತ್ರೆ, ವೈದ್ಯರ ಸೌಲಭ್ಯಗಳು ದೊರಕುವಂತಾಗಬೇಕು. ಪೌಷ್ಟಿಕ ಆಹಾರಗಳು ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಅಗತ್ಯವಿದೆ. ಇದೇ ಸಂದರ್ಭದಲ್ಲಿ ಮನೆಯೊಳಗಿನ ಗೃಹ ಕೆಲಸಗಳನ್ನೂ ‘ಕೆಲಸ’ ಎಂದು ಒಪ್ಪಿಕೊಳ್ಳುವುದನ್ನು ಕಲಿಯಬೇಕು. ಆ ಮೂಲಕ ಆಕೆಯ ಘನತೆಯನ್ನು ಎತ್ತಿ ಹಿಡಿಯಬೇಕು. ವಿದ್ಯೆ ಕಲಿತ ಹೆಣ್ಣಿನ ಕುರಿತಂತೆ ನಿಕೃಷ್ಟ ಭಾವನೆ ಹೊಂದಿರುವ ಮನಸ್ಥಿತಿ ಇನ್ನೂ ಜೀವಂತವಿದೆ. ಅಂತಹ ಮನಸ್ಥಿತಿಯನ್ನು ಅಳಿಸುವ ಕಡೆಗೆ ಸರಕಾರ ಗಮನ ಹರಿಸಬೇಕು. ಇಂದು ದೇಶದಲ್ಲಿ ಧಾರ್ಮಿಕ ಮೂಲಭೂತವಾದಿಗಳ ಹಿಡಿತ ಹೆಚ್ಚುತ್ತಿದೆ. ಇವರ ಪ್ರಾಬಲ್ಯ ಹೆಚ್ಚಿದಷ್ಟು ಅದು ಮಹಿಳೆಯರ ಬದುಕಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೆಚ್ಚುತ್ತಿರುವ ಇಂತಹ ಸನಾತನವಾದಿಗಳು ಮತ್ತು ಇಳಿಕೆಯಾಗುತ್ತಿರುವ ಲಿಂಗಾನುಪಾತಕ್ಕೆ ಒಂದಕ್ಕೊಂದು ಸಂಬಂಧ ಇದೆ ಎನ್ನುವುದನ್ನು ಅರ್ಥ ಮಾಡಿಕೊಂಡ ದಿನ, ಈ ದೇಶದಲ್ಲಿ ಇಳಿಕೆಯಾಗುವ ಹೆಣ್ಣು ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ದಾರಿಯೊಂದು ತೆರೆದು ಕೊಳ್ಳಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News