ನವಾಝ್ ಶರೀಫ್ ಹುಟ್ಟುಹಬ್ಬಕ್ಕೆ ತೆರಳಿದ್ದ ಮೋದಿ: ಭಾರತಕ್ಕೆ ಪಾಕ್ ವಿಧಿಸಿದ್ದ ಶುಲ್ಕವೆಷ್ಟು ಗೊತ್ತೇ?

Update: 2018-02-19 07:23 GMT

ಹೊಸದಿಲ್ಲಿ, ಫೆ.19: ಪ್ರಧಾನಿ ನರೇಂದ್ರ ಮೋದಿ ತಮ್ಮ ರಷ್ಯ, ಅಫ್ಘಾನಿಸ್ತಾನ, ಇರಾನ್ ಮತ್ತು ಕತರ್ ಭೇಟಿಯ ಸಂದರ್ಭ ಪಾಕಿಸ್ತಾನದ ವಾಯು ಮಾರ್ಗವನ್ನು ಉಪಯೋಗಿಸಿದ್ದಕ್ಕಾಗಿ ಆ ದೇಶ ಭಾರತಕ್ಕೆ ರೂ.2.86 ಲಕ್ಷ ಶುಲ್ಕ ವಿಧಿಸಿದೆ ಎಂದು ಆರ್‌ಟಿಐ ಮಾಹಿತಿಯೊಂದರಿಂದ ತಿಳಿದು ಬಂದಿದೆ.

ಆರ್‌ಟಿಐ ಕಾರ್ಯಕರ್ತ ನಿವೃತ್ತ ಸೇನಾಧಿಕಾರಿ ಲೋಕೇಶ್ ಬಾತ್ರಾ ಅವರು ಸಲ್ಲಿಸಿದ್ದ ಆರ್ಟಿಐ ಅರ್ಜಿಗೆ ದೊರೆತ ಉತ್ತರದಲ್ಲಿ ಲಭ್ಯ ಮಾಹಿತಿಯಂತೆ ಜೂನ್ 2016 ತನಕ ಭಾರತೀಯ ವಾಯು ಪಡೆಯ ವಿಮಾನವನ್ನು ಪ್ರಧಾನಿಯ ನೇಪಾಳ, ಭೂತಾನ್, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಕತರ್, ಆಸ್ಟ್ರೇಲಿಯ, ಪಾಕಿಸ್ತಾನ, ರಷ್ಯ, ಇರಾನ್, ಫಿಜಿ ಹಾಗೂ ಸಿಂಗಾಪುರ ಸೇರಿದಂತೆ 11 ದೇಶಗಳ ಭೇಟಿಯ ಸಂದರ್ಭ ಉಪಯೋಗಿಸಲಾಗಿತ್ತೆಂದು ತಿಳಿದು ಬಂದಿದೆ.

ಇಂತಹ ಒಂದು ಭೇಟಿಯ ಸಂದರ್ಭ ಪ್ರಧಾನಿ ಮೋದಿ ಆಗಿನ ಪಾಕ್ ಪ್ರಧಾನಿ ನವಾರ್ ಶರೀಫ್ ಅವರ ಮನವಿಯಂತೆ ಲಾಹೋರಿನಲ್ಲಿ ಡಿಸೆಂಬರ್ 25, 2015ರಂದು ಅಲ್ಪ ಹೊತ್ತು ತಂಗಿದ್ದರು. ರಷ್ಯ ಮತ್ತು ಅಫ್ಘಾನಿಸ್ತಾನ ಭೇಟಿಯಿಂದ ಹಿಂದಿರುಗುವ ಸಂದರ್ಭ ಈ ಭೇಟಿ ನಡೆದಿತ್ತು. ವಾಯು ಮಾರ್ಗ ಉಪಯೋಗಿಸಿದ್ದಕ್ಕಾಗಿ ಈ ನಿಟ್ಟಿನಲ್ಲಿ ರೂ.1.49 ಲಕ್ಷ ಶುಲ್ಕ ವಿಧಿಸಲಾಗಿತ್ತು ಎಂದು ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯಿಂದ ದೊರೆ ಮಾಹಿತಿ ತಿಳಿಸುತ್ತದೆ.

ಪ್ರಧಾನಿಯಿದ್ದ ಭಾರತೀಯ ವಾಯುಪಡೆಯ ವಿಮಾನ ಲಾಹೋರ್ ತಲುಪುತ್ತಿದ್ದಂತೆಯೇ ಅವರಿಗೆ ಕೆಂಪು ಹಾಸಿನ ಸ್ವಾಗತ ನೀಡಲಾಗಿತ್ತು. ನಂತರ ಹೆಲಿಕಾಪ್ಟರ್ ಮೂಲಕ ಮೋದಿ ಪಾಕ್ ಪ್ರಧಾನಿಯ ರಾವಲ್ಪಿಂಡಿ ನಿವಾಸಕ್ಕೆ ತೆರಳಿ ಅವರ ಹುಟ್ಟುಹಬ್ಬ ಸಮಾರಂಭದಲ್ಲಿ ಭಾಗವಹಿಸಿದ್ದರು.

ಅಂತೆಯೇ ಮೇ 22, 23, 2016ರಂದು ಮೋದಿ ಇರಾನ್ ಗೆ ತೆರಳಲು ಪಾಕ್ ಮೂಲಕ ಪ್ರಯಾಣಿಸಿದಾಗ ರೂ.77,215 ವಾಯು ಮಾರ್ಗ ವೆಚ್ಚವನ್ನು ಪಾಕಿಸ್ತಾನ ವಿಧಿಸಿದ್ದರೆ, ಜೂನ್ 40-6, 2016ರಂದು ಕತರ್ ಗೆ ಭೇಟಿ ನೀಡಿದ ಸಂದರ್ಭ ರೂ.59,215 ಶುಲ್ಕವನ್ನು ಪಾಕ್ ವಿಧಿಸಿತ್ತು. ಎರಡೂ ಭೇಟಿ ವೇಳೆ ಪ್ರಧಾನಿಯ ವಿಮಾನ ಪಾಕ್ ವಾಯು ಮಾರ್ಗದ ಮೂಲಕ ಪ್ರಯಾಣಿಸಿತ್ತು.
ಪ್ರಧಾನಿಯ ವಿದೇಶ ಪ್ರಯಾಣಗಳ ವೆಚ್ಚವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಭರಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News