ಸಾಲ ಪಡೆದು ವಂಚಿಸಿದ ರೋಟೊಮ್ಯಾಕ್ ಪೆನ್ ಕಂಪೆನಿ: ಸಿಬಿಐಯಿಂದ ಎಫ್‌ಐಆರ್ ದಾಖಲು

Update: 2018-02-19 08:06 GMT
ವಿಕ್ರಮ್ ಕೊಠ್ಠಾರಿ

ಹೊಸದಿಲ್ಲಿ, ಫೆ.19: ವಿವಿಧ ಸಾರ್ವಜನಿಕ ರಂಗದ ಬ್ಯಾಂಕ್‌ಗಳಿಂದ 800 ಕೋ.ರೂ.ಗೂ ಅಧಿಕ ಸಾಲ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರೀಯ ತನಿಖಾ ತಂಡ(ಸಿಬಿಐ) ಸೋಮವಾರ ರೋಟೊಮ್ಯಾಕ್ ಪೆನ್ ಕಂಪೆನಿ ಹಾಗೂ ಅದರ ಪ್ರವರ್ತಕ ವಿಕ್ರಮ್ ಕೊಠ್ಠಾರಿ ವಿರುದ್ಧ ಎಫ್‌ಐಆರ್ ದಾಖಲಿಸಿದೆ.

   ಸಿಬಿಐ ಇಂದು ಕಾನ್ಪುರದಲ್ಲಿರುವ ಕಂಪೆನಿಗೆ ಸೇರಿರುವ ಮೂರು ಸ್ಥಳಗಳಿಗೆ ದಾಳಿ ನಡೆಸಿದೆ. ಪ್ರಕರಣಕ್ಕೆ ಸಂಬಂಧಿಸಿ ಕೊಠ್ಠಾರಿ, ಆತನ ಪತ್ನಿ ಹಾಗೂ ಪುತ್ರನನ್ನು ಸಿಬಿಐ ತಂಡ ಅವರ ಮನೆಯಲ್ಲಿ ವಿಚಾರಣೆ ನಡೆಸಿದೆ. ಕೊಠ್ಠಾರಿ ದೇಶ ಬಿಟ್ಟು ಪರಾರಿಯಾಗಿದ್ದಾರೆ ಎಂದು ಸುದ್ದಿಯಾಗಿತ್ತು. ನಾನು ಕಾನ್ಪುರದಲ್ಲೇ ಇದ್ದೇನೆ ಎಂದು ಕೊಠ್ಠಾರಿ ರವಿವಾರ ಮಾಧ್ಯಮಕ್ಕೆ ಸ್ಪಷ್ಟಪಡಿಸಿದ್ದರು.

ಬ್ಯಾಂಕ್ ಆಫ್ ಬರೋಡಾ ನೀಡಿದ ದೂರಿನ ಮೇರೆಗೆ ಸಿಬಿಐ ರೋಟೊಮ್ಯಾಕ್ ಪೆನ್ ಕಂಪೆನಿಯ ವಿರುದ್ದ ಪ್ರಕರಣ ದಾಖಸಿಕೊಂಡಿದೆ. ರೋಟೋಮ್ಯಾಕ್ ಉದ್ದೇಶಪೂರ್ವಕವಾಗಿ ಸಾಲ ಪಡೆದು ವಂಚನೆ ಮಾಡಿದೆ ಎಂದು ಬ್ಯಾಂಕ್ 2017ರ ಫೆಬ್ರವರಿಯಲ್ಲಿ ಘೋಷಿಸಿತ್ತು. ಅಲಹಾಬಾದ್ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸುತ್ತಿರುವ ಪೆನ್ ಕಂಪೆನಿ, ತಾನು ಬ್ಯಾಂಕ್‌ಗೆ 300 ಕೋ.ರೂ. ಆಸ್ತಿಪಾಸ್ತಿಯನ್ನು ಅಡವಿಟ್ಟಿದ್ದು, ಆದಾಗ್ಯೂ ಉದ್ದೇಶಪೂರ್ವಕ ವಂಚನೆ ಮಾಡುತ್ತಿರುವುದಾಗಿ ಬ್ಯಾಂಕ್ ಆಪಾದಿಸುತ್ತಿದೆ ಎಂದು ದೂರಿತ್ತು. ನ್ಯಾಯಾಲಯ ಕಂಪೆನಿ ಪರ ಆದೇಶ ನೀಡಿತ್ತು. ಆದರೆ, ಕಂಪೆನಿ ಸಾಲ ಮರು ಪಾವತಿ ಮಾಡಲು ವಿಫಲವಾಗಿತ್ತು.

 ಕಾನ್ಪುರ ಮೂಲದ ಪೆನ್ ಕಂಪೆನಿ ಅಲಹಾಬಾದ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ 800 ಕೋ.ರೂ.ಗೂ ಅಧಿಕ ಸಾಲ ಪಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News