ಪ್ರಧಾನಿಯ 'ಪರೀಕ್ಷಾ ಪೆ ಚರ್ಚಾ' ವೀಕ್ಷಿಸಲು ದಲಿತ ವಿದ್ಯಾರ್ಥಿಗಳನ್ನು ದೊಡ್ಡಿಯಲ್ಲಿ ಕುಳ್ಳಿರಿಸಿದರು!

Update: 2018-02-19 08:01 GMT
ಸಾಂದರ್ಭಿಕ ಚಿತ್ರ

ಡೆಹ್ರಾಡೂನ್, ಫೆ.19: ಇಲ್ಲಿನ ಶಾಲೆಯೊಂದು ಪ್ರಧಾನಿಯ 'ಪರೀಕ್ಷಾ ಪೆ ಚರ್ಚಾ' ಕಾರ್ಯಕ್ರಮವನ್ನು ವೀಕ್ಷಿಸಲು ದಲಿತ ವಿದ್ಯಾರ್ಥಿಗಳನ್ನು ಕುದುರೆ ದೊಡ್ಡಿಯಲ್ಲಿ ಕುಳ್ಳಿರಿಸಿದೆ ಎನ್ನುವ ಆರೋಪ ಕೇಳಿಬಂದಿವೆ.

ಇಲ್ಲಿನ ಚೇಸ್ತ ಗ್ರಾಮ ಪಂಚಾಯತಿನ ಕುಲ್ಲು ಎಂಬ ಪ್ರದೇಶವೊಂದರಲ್ಲಿರುವ ಸರಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಪ್ರಧಾನಿಯ ಕಾರ್ಯಕ್ರಮದ ವೀಕ್ಷಣೆಗಾಗಿ ಶಾಲಾಡಳಿತ ಸಮಿತಿಯ ಅಧ್ಯಕ್ಷರ ನಿವಾಸದಲ್ಲಿ ಏರ್ಪಾಟು ಮಾಡಲಾಗಿತ್ತು. ಇತರ ವಿದ್ಯಾರ್ಥಿಗಳನ್ನು ಟಿವಿಯಿರುವ ಕೊಠಡಿಯಲ್ಲಿಯೇ ಕೂರಿಸಲಾಗಿದ್ದರೆ, ದಲಿತ ವಿದ್ಯಾರ್ಥಿಗಳನ್ನು ಕೊಠಡಿಯ ಹೊರಗೆ ದನ, ಕುದುರೆಗಳನ್ನಿರಿಸಲಾಗುವ ಸ್ಥಳದಲ್ಲಿ ಕೂರಿಸಲಾಗಿತ್ತಲ್ಲದೆ ಕಾರ್ಯಕ್ರಮದ ಅರ್ಧದಲ್ಲಿಯೇ ಎದ್ದು ಹೊರ ಹೋಗುವಂತೆ ಎಚ್ಚರಿಕೆಯನ್ನೂ ನೀಡಲಾಗಿತ್ತು ಎಂದು ಆರೋಪಿಸಲಾಗಿದೆ.

ಇದರಿಂದ ನೊಂದ ದಲಿತ ವಿದ್ಯಾರ್ಥಿಗಳು ತಮ್ಮ ಶಾಲಾ ನೋಟ್ ಬುಕ್ ನಲ್ಲಿಯೇ ದೂರೊಂದನ್ನು ಬರೆದು ಕುಲ್ಲು ಜಿಲ್ಲಾಧಿಕಾರಿ ಯೂನುಸ್ ಅವರಿಗೆ ನೀಡಿದ್ದಾರೆ. ಶಾಲೆಯಲ್ಲಿ ಮಧ್ಯಾಹ್ನದ ಊಟದ ಸಮಯದಲ್ಲೂ ದಲಿತ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಕೂರಿಸಿ ತಾರತಮ್ಯದ ನಿಲುವು ತಳೆಯಲಾಗುತ್ತಿದೆ. ಇದನ್ನು ನೋಡಿ ಶಾಲಾ ಮುಖ್ಯೋಪಾಧ್ಯಾಯರೂ ಸುಮ್ಮನಿರುತ್ತಾರೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಈ ಘಟನೆಯ ವೀಡಿಯೋ ಕ್ಲಿಪ್ ಒಂದು ಹೊರಬಂದ ನಂತರ ಸ್ಥಳೀಯ ಸಂಘಟನೆ ಅನುಸೂಚಿತ್ ಜಾತಿ ಕಲ್ಯಾಣ ಸಂಘ್ ಶಾಲಾ ಮುಖ್ಯೋಪಾಧ್ಯಾಯ ರಾಜನ್ ಭಾರದ್ವಾಜ್ ವಿರುದ್ಧ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಬಳಿ ತನ್ನ ದೂರನ್ನು ಕೊಂಡೊಯ್ದಿತ್ತು. ಮುಖ್ಯೋಪಾಧ್ಯಾಯರು ಕ್ಷಮೆಯಾಚಿಸಿದ್ದರೂ ಇದು ಸಾಕಾಗದು ಎಂದು ಸಂಘಟನೆ ಹೇಳಿದೆ

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಶಿಕ್ಷಣ ಸಚಿವ ಸುರೇಶ್ ಭಾರದ್ವಾಜ್ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ಜಿಲ್ಲಾ ಯೋಜನಾ ಅಧಿಕಾರಿ ಐಸಿಡಿಎಸ್,  ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಯವರಿರುವ ತನಿಖಾ ಸಮಿತಿ ಇಂದು ಶಾಲೆಗೆ ಭೇಟಿ ನೀಡಿ ವಿಚಾರಣೆ ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News