“ಮಕ್ಕಳನ್ನು ಹೀಗೆ ಬೆಳೆಸಬೇಕು” ಎಂದು ಪ್ರಕಾಶ್ ರೈಯಿಂದ ಶಹಬ್ಬಾಸ್ ಗಿರಿ ಗಳಿಸಿದ್ದ ಶಾಸಕ ಹಾರಿಸ್ ಪುತ್ರ!

Update: 2018-02-19 10:36 GMT

ಮಂಗಳೂರು, ಫೆ.19: ಯುವಕನೋರ್ವನಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಪೊಲೀಸರೆದುರು ಶರಣಾಗಿರುವ ಶಾಸಕ ಹಾರಿಸ್ ಪುತ್ರ ಮುಹಮ್ಮದ್ ನಲಪಾಡ್ ಹಾರಿಸ್ ನನ್ನು ನಟ, ನಿರ್ದೇಶಕ ಪ್ರಕಾಶ್ ರೈ ಹೊಗಳಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಶಾಂತಿನಗರದಲ್ಲಿ ಇತ್ತೀಚೆಗೆ ಶಾಸಕ ಎನ್.ಎ. ಹಾರಿಸ್ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಪ್ರಕಾಶ್ ರೈ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾನು ಗ್ರಾಮವೊಂದನ್ನು ದತ್ತು ಪಡೆದಿದ್ದೇನೆ ಎಂದರು.

ಭಾಷಣ ಆರಂಭಕ್ಕೂ ಮುನ್ನ “ನಾನು ಒಬ್ಬರಿಗೆ ಧನ್ಯವಾದ ಸಲ್ಲಿಸಬೇಕು” ಎಂದು ಹಾರಿಸ್ ಪುತ್ರ ಮುಹಮ್ಮದ್ ನಲಪಾಡ್ ನನ್ನು ತನ್ನ ಬಳಿಗೆ ಕರೆದ ಪ್ರಕಾಶ್ ರೈ, “ಇವತ್ತು ನಾನು ಒಂದು ಊರನ್ನು ದತ್ತು ಪಡೆಯಲು ಚಿತ್ರದುರ್ಗಕ್ಕೆ ಹೋಗಿದ್ದೆ. ಅಲ್ಲಿನ ಮಕ್ಕಳಿಗೆ ಫ್ಲೋರೈಡ್ ಸಮಸ್ಯೆಯಿದೆ. ತುಂಬಾ ಕಷ್ಟದಲ್ಲಿರುವ ಊರು. ಹೋಗುವುದಕ್ಕೆ ಮೊದಲು ನಮ್ಮ ಹಾರಿಸ್ ಅವರ ಪುತ್ರ ನನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದ. ನಾನು ಕಾರ್ಯಕ್ರಮಕ್ಕೆ ಬರುತ್ತೇನೆ. ನನ್ನದು ಪ್ರಕಾಶ್ ರಾಜ್ ಫೌಂಡೇಶನ್ ಇದೆ. ಹಳ್ಳಿಗಳನ್ನು ದತ್ತು ಪಡೆಯುತ್ತೇನೆ. ನಿಮ್ಮ ಕೈಲಾದ ಸಹಾಯ ಮಾಡಿ ಅಂದೆ. ಈ ಹುಡುಗ ನನಗೆ ಸಹಾಯ ಮಾಡಿದ. ನಾನು ದತ್ತು ಪಡೆಯುವ ಹಳ್ಳಿಯಲ್ಲಿ ಒಬ್ಬ ಬಡವನಿಗಾಗಿ ನಾನು ಮನೆಯನ್ನು ಕಟ್ಟಿದರೆ,ರೈತನಿಗೆ ಸಹಾಯ ಮಾಡಿದರೆ ಅದು ಈ ಹುಡುಗ ನನಗೆ ಕೊಟ್ಟಿರುವುದು. ಹೀಗೆ ಬೆಳೆಸಬೇಕು ಮಕ್ಕಳನ್ನು” ಎಂದು ಹೇಳಿದ್ದಾರೆ.

ಯುವಕನಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ವರದಿಯಾಗುತ್ತಲೇ ಪ್ರಕಾಶ್ ರೈ ಮುಹಮ್ಮದ್ ನಲಪಾಡ್ ಹಾರಿಸ್ ನನ್ನು ಹೊಗಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕಾರ್ಯಕ್ರಮ ನಡೆದದ್ದು ಯಾವಾಗ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. Thrilling News India ಎನ್ನುವ ಹೆಸರಿನ ಯುಟ್ಯೂಬ್ ಚಾನೆಲ್ ಈ ವಿಡಿಯೊವನ್ನು ಅಪ್ಲೋಡ್ ಮಾಡಿದೆ.

ಈ ಬಗ್ಗೆ ನಿನ್ನೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ರೈ, “ಯಾರನ್ನಾದರೂ ಹೊಗಳುವ ಮೊದಲು ಯೋಚಿಸಬೇಕು ಹಾಗೂ ಹೊಗಳುವಾಗ ಎಚ್ಚರಿಕೆಯಿಂದಿರಬೇಕು ಎಂಬ ಸತ್ಯ ನನಗೆ ಅರ್ಥವಾಗಿದೆ. ಅಂದು ಒಳ್ಳೆಯ ಕೆಲಸ ಮಾಡಿದ್ದರಿಂದ ಹಾರಿಸ್‌ನ ಹೊಗಳಿದ್ದೆ. ಆದರೆ, ಇಂದು ಇನ್ನೊಬ್ಬರ ಮೇಲೆ ಅವರು ಹಲ್ಲೆ ಮಾಡಿರುವುದು ಸರಿಯಲ್ಲ. ಇದನ್ನು ನಾನು ಖಂಡಿಸುತ್ತೇನೆ” ಎಂದಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News