ಬೆಂಗಳೂರು: ಶೇ.24.10ರಷ್ಟು ಕಾಮಗಾರಿ ಗುತ್ತಿಗೆ ಹಂಚಿಕೆ ಮಾಡಲು ಆಗ್ರಹ

Update: 2018-02-19 18:07 GMT

ಬೆಂಗಳೂರು, ಫೆ.19: ನಿರ್ಮಾಣ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನಾಂಗದವರಿಗೆ ನೀಡಿರುವ 50 ಲಕ್ಷ ರೂ. ಮಿತಿಯ ಮಾನದಂಡ ರದ್ದುಪಡಿಸಿ, ಶೇ. 24.10ರಷ್ಟು ಕಾಮಗಾರಿ ಗುತ್ತಿಗೆ ಹಂಚಿಕೆ ಮಾಡಬೇಕು ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಗುತ್ತಿಗೆದಾರ ಸಂಘ ಸರಕಾರವನ್ನು ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಲ್.ಕೆ.ಅರಸು, ಗುತ್ತಿಗೆಗಳಲ್ಲಿ ಶೇ. 24.10ರಷ್ಟು ಮೀಸಲು ಕಲ್ಪಿಸಲು ಆದೇಶ ಮಾಡಿರುವ ಸರಕಾರ 50 ಲಕ್ಷ ರೂ.ಗಳ ಒಳಗಿನ ಕಾಮಗಾರಿಗಳನ್ನು ಮಾತ್ರ ನೀಡಬೇಕು ಎಂದು ಹೇಳಿರುವುದು ಸರಿಯಲ್ಲ. ಹೀಗಾಗಿ ಅದನ್ನು ರದ್ದುಪಡಿಸಿ ಸಮಪಾಲು ಗುತ್ತಿಗೆ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ಗುತ್ತಿಗೆ ಮೊತ್ತದ ಎಲ್ಲಾ ಗುತ್ತಿಗೆಗಳನ್ನು ಕ್ರೋಡೀಕರಿಸಿ, ಪ್ಯಾಕೇಜ್ ಪದ್ಧತಿಯನ್ನು ರದ್ದುಪಡಿಸಬೇಕು. ಸರಕು ಸಂಗ್ರಹಣಾ ಸೇವೆ, ಖರೀದಿ, ಮಾರಾಟ, ಪರವಾನಿಗೆ ಬಾಡಿಗೆ ಇತ್ಯಾದಿಗಳಲ್ಲಿ ಮೀಸಲಾತಿ ಆದೇಶ ಜಾರಿಯಾಗಬೇಕು. ಟೆಂಡರ್‌ನಲ್ಲಿ ವಿಧಿಸುವ ಷರತ್ತುಗಳಲ್ಲಿ ರಿಯಾಯಿತಿ ನೀಡಬೇಕು. ಮೀಸಲಾತಿ ಜಾರಿಯಿದ್ದರೂ ಈ ಜನರಿಗೆ ಗುತ್ತಿಗೆ ಕಾಮಗಾರಿಗಳು ಸಿಗದಂತೆ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳೇಕು ಎಂದು ಅವರು ಆಗ್ರಹಿಸಿದರು.

ನಿರ್ಮಾಣ ಕಾಮಗಾರಿಗಳಲ್ಲಿ 50 ಲಕ್ಷ ಮೀರದ ಕಾಮಗಾರಿಗಳಲ್ಲಿ ಶೇ. 24.10ರಷ್ಟು ಕಾಮಗಾರಿಗಳನ್ನು ಜನಾಂಗದವರಿಗೆ ನೀಡಲು ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮಕ್ಕೆ ತಿದ್ದುಪಡಿ ತರಲು ರಾಷ್ಟ್ರಪತಿಯಿಂದ ಒಪ್ಪಿಗೆ ಪಡೆದು ಅಧಿಸೂಚನೆ ಹೊರಡಿಸಿರುವುದು ತೋರಿಕೆಗೆ ಮಾತ್ರ. ಇದರಿಂದ ಈ ಜನರ ನಿರುದ್ಯೋಗ ಸಮಸ್ಯೆ ಬಗೆಹರಿಯದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News