ನಿರಾಶ್ರಿತ ರೊಹಿಂಗ್ಯಾ ಮಕ್ಕಳಿಗೆ ಸಹಾಯ ಮಾಡಿ: ಫುಟ್ಬಾಲ್ ತಾರೆ ರೊನಾಲ್ಡೊ ಮನವಿ

Update: 2018-02-20 10:24 GMT

ಮ್ಯಾಡ್ರಿಡ್, ಫೆ.20: ಖ್ಯಾತ ಫುಟ್ಬಾಲ್ ಆಟಗಾರ, ರಿಯಲ್ ಮ್ಯಾಡ್ರಿಡ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಮ್ಯಾನ್ಮಾರ್ ನ ರೊಹಿಂಗ್ಯಾ ಬಿಕ್ಕಟ್ಟಿನಿಂದ ಸಂಕಷ್ಟದಲ್ಲಿರುವ ರೊಹಿಂಗ್ಯಾ ನಿರಾಶ್ರಿತರು ಹಾಗೂ ಅವರ ಪುಟ್ಟ ಮಕ್ಕಳ ದಯನೀಯ ಸ್ಥಿತಿಗೆ ಮಮ್ಮಲ ಮರುಗಿದ್ದಾರೆ. ಸಂತ್ರಸ್ತರಿಗೆ ಸಹಾಯ ಹಸ್ತ ಚಾಚುವಂತೆ ಅವರು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ.

ತಮ್ಮ ಟ್ವಿಟರ್ ಹಾಗೂ ಇನ್‍ಸ್ಟಾಗ್ರಾಂ ಖಾತೆಗಳಲ್ಲಿ 33 ವರ್ಷದ ಈ ಫುಟ್ಬಾಲ್ ತಾರೆ ಬಾಂಗ್ಲಾದೇಶದ ನಿರಾಶ್ರಿತರ ಶಿಬಿರದಲ್ಲಿರುವ ಕ್ಲಿನಿಕ್ ಒಂದರ ಎದುರುಗಡೆ ನಿಂತಿರುವ ರೊಹಿಂಗ್ಯಾ ತಂದೆ ಮತ್ತು ಮಗುವಿನ ಚಿತ್ರ ಹಾಗೂ ತಾವು ತಮ್ಮ ನಾಲ್ಕು ಮಂದಿ ಮಕ್ಕಳೊಂದಿಗಿರುವ ಚಿತ್ರ ಪೋಸ್ಟ್ ಮಾಡಿ- "ಈ ಒಂದು ಜಗತ್ತಿನಲ್ಲಿ ನಾವೆಲ್ಲರೂ ನಮ್ಮ ಮಕ್ಕಳನ್ನು ಪ್ರೀತಿಸುತ್ತೇವೆ. ದಯವಿಟ್ಟು ಸಹಾಯ ಮಾಡಿ #ರೋಹಿಂಗ್ಯ#ನಿರಾಶ್ರಿತರು'' ಎಂದು ಬರೆದಿದ್ದಾರಲ್ಲದೆ, ಸೇವ್‍ದಿಚಿಲ್ಡ್ರನ್.ಆರ್ಗ್/ಕ್ರಿಸ್ಟಿಯಾನೋ ಇದರ ವೆಬ್ ತಾಣದ ಲಿಂಕ್ ನೀಡಿದ್ದಾರೆ.

ವಿಶ್ವದ ಅತ್ಯಂತ ಶ್ರೀಮಂತ ಕ್ರೀಡಾಪಟುಗಳಲ್ಲೊಬ್ಬರಾಗಿರುವ ರೊನಾಲ್ಡೊ ಹಲವಾರು ಸಮಾಜಸೇವಾ ಕೈಂಕರ್ಯಗಳಲ್ಲಿಯೂ ಕೈಜೋಡಿಸಿದ್ದಾರೆ. 'ಸೇವ್ ದಿ ಚಿಲ್ಡ್ರನ್', ಯುನಿಸೆಫ್ ಹಾಗೂ ವರ್ಲ್ಡ್ ವಿಷನ್ ಇದರ ರಾಯಭಾರಿಯಾಗಿ ಅವರು ಕರ್ತವ್ಯ  ನಿರ್ವಹಿಸುತ್ತಿದ್ದಾರೆ. 2011ರಲ್ಲಿ ಅವರು ತಮ್ಮ ಯುರೋಪಿಯನ್ ಗೋಲ್ಡನ್ ಬೂಟ್ ಟ್ರೋಫಿ ಹರಾಜು ಹಾಕಿ ಅದರಿಂದ ದೊರೆತ 1.2 ಮಿಲಿಯನ್ ಪೌಂಡ್  ಹಣವನ್ನು  ಯುದ್ಧ ಪೀಡಿತ ಗಾಝಾದಲ್ಲಿ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ದೇಣಿಗೆ ನೀಡಿದ್ದರು. ತಾವು 2013ರಲ್ಲಿ ಗೆದ್ದ ಬ್ಯಾಲ್ಲನ್ ಡಿ'ಒರ್ ಟ್ರೋಫಿಯನ್ನು ಅವರು ಹರಾಜು ಹಾಕಿ ಅದರ ಹಣದಿಂದ  ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗಾಗಿ ದೇಣಿಗೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News