ಸಿ.ಎಂ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಜಿ.ಟಿ.ದೇವೇಗೌಡ ಪಟ್ಟು: ಆಡಳಿತ-ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ

Update: 2018-02-20 13:40 GMT

ಬೆಂಗಳೂರು, ಫೆ.20: ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಶಾಸಕನಾಗಿರುವ ನನ್ನನ್ನು ನಿರ್ಲಕ್ಷಿಸಿ ಸರಕಾರಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಅವಕಾಶ ನೀಡುವಂತೆ ಕೋರಿ ಜೆಡಿಎಸ್ ಸದಸ್ಯ ಜಿ.ಟಿ.ದೇವೇಗೌಡ ಮಾಡಿದ ಆಗ್ರಹವು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

ಮಂಗಳವಾರ ವಿಧಾನಸಭೆಯಲ್ಲಿ ಮಾತನಾಡಿದ ಜಿ.ಟಿ.ದೇವೇಗೌಡ, ಶಾಸನಬದ್ಧ, ಸಂವಿಧಾನ ಬದ್ಧವಾಗಿ ಜನರಿಂದ ಆಯ್ಕೆಯಾಗಿ ಬಂದಿದ್ದೇನೆ. ಮೂರು ಬಾರಿ ಶಾಸಕನಾಗಿ, ಎರಡು ಬಾರಿ ಜಿಲ್ಲಾ ಪಂಚಾಯತ್ ಸದಸ್ಯ, ಒಮ್ಮೆ ಜಿಲ್ಲಾ ಪಂಚಾಯತ್ ಅಧ್ಯಕ್ಷ, 20 ವರ್ಷ ಸಹಕಾರ ಮಂಡಳದ ಅಧ್ಯಕ್ಷನಾಗಿ ಸಾರ್ವಜನಿಕ ಜೀವನದಲ್ಲಿದ್ದೇನೆ ಎಂದರು. ಆದರೆ, ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ಚುನಾವಣೆಯನ್ನು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ ಬಳಿಕ ಕೋಟ್ಯಂತರ ರೂ.ಗಳ ಅನುದಾನ ನೀಡಿ, ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ, ಸ್ಥಳೀಯ ಚುನಾಯಿತ ಪ್ರತಿನಿಧಿಗಳಿಗೆ ಅವಕಾಶ ನೀಡದೆ, ಅಧಿಕಾರೇತರ ವ್ಯಕ್ತಿಗಳು ಕಾಮಗಾರಿಗಳಿಗೆ ಗುದ್ದಲಿಪೂಜೆ ನಡೆಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಗೆಜ್ಜಗಳ್ಳಿ ಎಂಬಲ್ಲಿ ಮುಖ್ಯಮಂತ್ರಿಯ ಪುತ್ರ ನಾಲ್ಕು ಪೊಲೀಸ್ ವಾಹನಗಳ ರಕ್ಷಣೆಯೊಂದಿಗೆ ಹೋಗಿ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದವರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಹೇಗೆ ಕೆಲಸ ಮಾಡುವುದು ಎಂದು ಅವರು ಪ್ರಶ್ನಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲಬಹುದು. ನನ್ನ ವಿರುದ್ಧ ನಾಳೆ ಚುನಾವಣೆಯಲ್ಲಿ ಯಾರೇ ನಿಂತು ಸ್ಪರ್ಧಿಸಲಿ. ಆದರೆ, ಈಗ ನಾನು ಶಾಸಕನಾಗಿರುವಾಗ ನನ್ನನ್ನು ನಿರ್ಲಕ್ಷಿಸಿ ನನ್ನ ಮತ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಬೇರೆಯವರು ಚಾಲನೆ ನೀಡುವುದು ನನ್ನ ಹಕ್ಕಿಗೆ ಮಾಡಿದ ಚ್ಯುತಿ ಎಂದು ಅವರು ಆರೋಪಿಸಿದಾಗ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.

ಇದೇ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಬಿಜೆಪಿ ಸದಸ್ಯರಾದ ಗೋವಿಂದ ಕಾರಜೋಳ, ವೈ.ಎ.ನಾರಾಯಣಸ್ವಾಮಿ ಜಿ.ಟಿ.ದೇವೇಗೌಡ ರನ್ನು ಬೆಂಬಲಿಸಿದರು. ಅಲ್ಲದೆ, ಶಾಸಕರಿಗೆ ರಕ್ಷಣೆ ಒದಗಿಸುವವರು ಯಾರು ಎಂದು ಸಭಾಧ್ಯಕ್ಷರನ್ನು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈಸೂರಿನ ಇಲವಾಲದಲ್ಲಿ ಶಾಸಕರಿಗೆ ಆಹ್ವಾನ ನೀಡಿಯೇ ಸರಕಾರಿ ಕಾರ್ಯಕ್ರಮ ಆಯೋಜಿಸಿದ್ದೇವೆ. ನನ್ನ ಪುತ್ರ ಹಳ್ಳಿಗಳಿಗೆ ಹೋಗುವುದು ತಪ್ಪೆ. ಒಂದು ವೇಳೆ ನಿಯಮಬಾಹಿರವಾಗಿ ಏನಾದರೂ ನಡೆದಿದ್ದರೆ ವರದಿ ತರಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಿ ಎಂದು ಸ್ಪೀಕರ್‌ಗೆ ಮನವಿ ಮಾಡಿದರು.

ಪ್ರಕರಣದ ಕುರಿತು ವರದಿ ತರಿಸಿಕೊಂಡು ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳುವುದಾಗಿ ಸ್ಪೀಕರ್ ತಿಳಿಸಿದರು. ಆದರೆ, ಇದಕ್ಕೆ ತೃಪ್ತರಾಗದ ಜಿ.ಟಿ.ದೇವೇಗೌಡ, ಸ್ಥಳೀಯರ ಮೇಲೆ ಹಲ್ಲೆ ಮಾಡಿರುವ ಪೊಲೀಸರನ್ನು ಅಮಾನತ್ತು ಮಾಡುತ್ತೀರೋ ಇಲ್ಲವೋ ಎಂಬುದರ ಬಗ್ಗೆ ಭರವಸೆ ನೀಡಿ ಎಂದು ಪಟ್ಟು ಹಿಡಿದರು.

ಈ ಸಂದರ್ಭದಲ್ಲಿ ಎದ್ದು ನಿಂತ ಬಿಜೆಪಿ ಸದಸ್ಯ ವೈ.ಎ.ನಾರಾಯಣಸ್ವಾಮಿ, ನಾನು ಪ್ರತಿನಿಧಿಸುತ್ತಿರುವ ಹೆಬ್ಬಾಳ ಕ್ಷೇತ್ರದಲ್ಲೂ ಇದೇ ಪರಿಸ್ಥಿತಿ. ಶಾಸಕ ದಿನೇಶ್‌ಗುಂಡೂರಾವ್, ವಿಧಾನಪರಿಷತ್ ಸದಸ್ಯ ಭೈರತಿ ಸುರೇಶ್ ಅವರನ್ನು ಕರೆಸಿ ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ. ಅಲ್ಲದೆ, ಸುರೇಶ್ ಶಿಫಾರಸ್ಸಿನ ಮೇಲೆ ಸರಕಾರ 4 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಕೂಡಲೆ ಸರಕಾರ ಹಣ ಬಿಡುಗಡೆಯ ಆದೇಶವನ್ನು ಹಿಂಪಡೆಯಬೇಕು. ಅಲ್ಲದೆ, ಅನುದಾನಕ್ಕೆ ಅನುಮೋದನೆ ನೀಡಿರುವ ಅಧಿಕಾರಿಗಳವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಾರಾಯಣಸ್ವಾಮಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗೋವಿಂದ ಕಾರಜೋಳ, ನನ್ನ ಕ್ಷೇತ್ರದಲ್ಲೂ ಇಂತಹ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿವೆ. ಸದನದಲ್ಲಿ ಮೂರು ಬಾರಿ ಪ್ರಸ್ತಾಪ ಮಾಡಿದರೂ ಯಾವುದೆ ಪ್ರಯೋಜನವಾಗಿಲ್ಲ ಎಂದು ಟೀಕಿಸಿದರು. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮಧ್ಯಪ್ರವೇಶಿಸಿ, ನಿಮ್ಮ ಸರಕಾರ ಆಡಳಿತದಲ್ಲಿದ್ದಾಗ ವಿರೋಧ ಪಕ್ಷದ ನಾಯಕರಿಗೆ ಕನಿಷ್ಠ ಗೌರವವನ್ನು ನೀಡುತ್ತಿರಲಿಲ್ಲ ಎಂದು ಕಿಚಾಯಿಸಿದರು. ಈ ಸಂದರ್ಭದಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News