ಬೆಂಗಳೂರು: ಚುನಾವಣಾ ಅಕ್ರಮ ತಡೆಗಟ್ಟಲು ಆಗ್ರಹಿಸಿ ಉಪವಾಸ ಸತ್ಯಾಗ್ರಹ

Update: 2018-02-20 13:59 GMT

ಬೆಂಗಳೂರು, ಫೆ. 20: ಚುನಾವಣೆಯಲ್ಲಿ ನಡೆಯುತ್ತಿರುವ ಅಕ್ರಮ ತಡೆಗಟ್ಟಲು ಹಾಗೂ ಪ್ರಾಮಾಣಿಕ ಮತದಾನ ನಡೆಸಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ ಜನ ಜಾಗೃತಿ ವೇದಿಕೆ ವತಿಯಿಂದ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವೇದಿಕೆ ಮುಖಂಡ ಭಗತ್, ರಾಜ್ಯದಲ್ಲಿ ಮುಂದಿನ ಎರಡು-ಮೂರು ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಈಗಾಗಲೇ ಚುನಾವಣೆಯಲ್ಲಿ ಗೆಲುವು ಪಡೆಯಲು ಹಲವು ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಕಸರತ್ತು ನಡೆಸುತ್ತಿವೆ. ಜಾತಿ, ಧರ್ಮಗಳ ಮಧ್ಯೆ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದರೊಂದಿಗೆ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಹಲವರು ವಾಮ ಮಾರ್ಗಗಳನ್ನು ಅನುಸರಿಸುವ ಸಾಧ್ಯತೆಯಿದೆ ಎಂದು ಹೇಳಿದರು.

ಅಕ್ರಮ ಮಾರ್ಗಗಳ ಮೂಲಕ ಚುನಾವಣೆಯಲ್ಲಿ ಗೆದ್ದು ಬಂದಿರುವ ಎಲ್ಲ ಪಕ್ಷಗಳೂ ಜನಪರವಾದ ಯಾವುದೇ ನೀತಿಗಳನ್ನು ಜಾರಿ ಮಾಡಿಲ್ಲ. ಇಂದಿಗೂ ವಿದ್ಯಾರ್ಥಿ, ಯುವ ಜನರು, ಮಹಿಳೆಯರು, ಕೂಲಿ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದು ಧರಣಿ ಮಾಡುತ್ತಿದ್ದಾರೆ. ಆದುದರಿಂದ ಮುಂದಿನ ಚುನಾವಣೆಯಲ್ಲಿ ಅಕ್ರಮ ನಡೆಯಲು ಬಿಡಬಾರದು. ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಪ್ರಾಮಾಣಿಕ ಮತದಾನ ನಡೆಯಬೇಕು. ಅರ್ಹ ಜನ ಪ್ರತಿನಿಧಿಗಳು ಆಯ್ಕೆಯಾಗಬೇಕು ಎಂದು ಅವರು ತಿಳಿಸಿದರು.

ಎಸ್‌ಎಫ್‌ಐ ಕಾರ್ಯದರ್ಶಿ ಗುರುರಾಜ್ ದೇಸಾಯಿ ಮಾತನಾಡಿ, ಅತೀ ಭ್ರಷ್ಟರು ಪ್ರತಿ ಬಾರಿ ಅನ್ಯ ಮಾರ್ಗದ ಮೂಲಕ ಚುನಾವಣೆಯಲ್ಲಿ ಆಯ್ಕೆಯಾಗುತ್ತಾ ಬರುತ್ತಿದ್ದಾರೆ. ಅದರಿಂದಾಗಿ ಸಾಮಾನ್ಯರಿಗೆ ಸಿಗಬೇಕಾದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ದೂರಿದರು.

ಇಂದಿನ ಸರಕಾರಗಳು, ರಾಜಕೀಯ ಪಕ್ಷಗಳು ಭ್ರಷ್ಟರಿಗೆ ಬಲೆ ಬೀಸುತ್ತಿದ್ದು, ಮುಂದಿನ ಚುನಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮ ನಡೆಯುವ ಸಾಧ್ಯತೆಯಿದೆ. ಹೀಗಾಗಿ, ಭ್ರಷ್ಟಾಚಾರದಲ್ಲಿ ಮುಳುಗಿರುವ, ಜನರನ್ನು ಖರೀದಿಸಲು ಮುಂದಾಗಿರುವ ರಾಜಕೀಯ ಪಕ್ಷಗಳಿಗೆ ಹಾಗೂ ಜನ ನಾಯಕರಿಗೆ ಸರಿಯಾದ ಉತ್ತರ ಹೇಳಬೇಕು. ಅಲ್ಲದೆ, ಈ ರೀತಿ ಅಕ್ರಮ ಮಾರ್ಗಗಳನ್ನು ಅನುಸರಿಸುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗ ಮುಂದಾಗಬೇಕು ಎಂದು ಅವರು ಮನವಿ ಮಾಡಿದರು.

ಮತದಾನ ಯಂತ್ರದಲ್ಲಿ ಪ್ರತಿಯೊಬ್ಬ ಮತದಾರರು ಹೆಬ್ಬೆಟ್ಟು ಅಥವಾ ಕಣ್ಣುಗಳಿಂದ ಮತದಾನ ಮಾಡುವ ವ್ಯವಸ್ಥೆ ಕಲ್ಪಿಸಬೇಕು. ಮತದಾನದ ನಂತರ ಮತದಾರರ ನೋಂದಣಿಯನ್ನು ಮೊಬೈಲ್ ಸಂಖ್ಯೆಗೆ ನೀಡಬೇಕು. ಸಂದೇಶದಲ್ಲಿ ಮತದಾನ ಮಾಡಿದವರ ಹೆಸರನ್ನು ನಮೂದಿಸಬೇಕು. ಪ್ರತಿಯೊಂದು ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಬೇಕು.

ದೇಶದ ಪ್ರತಿಯೊಂದು ರಾಜ್ಯದಲ್ಲಿ ರಾಜಕಾರಣಿಗಳಿಗೆ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು. ನ್ಯಾಯಾಲಯಗಳಲ್ಲಿ ಗ್ರಾಮ ಪಂಚಾಯತಿ ಸದಸ್ಯನಿಂದ ಹಿಡಿದು ಮುಖ್ಯಮಂತ್ರಿಗಳವರೆಗಿನ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸಬೇಕು. ಚುನಾವಣೆ ಸಮಯದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿ ಅಕ್ರಮ ಎಸಗಿರುವುದು ಸಾಬೀತಾದರೆ ಅಂತಹ ರಾಜಕೀಯ ವ್ಯಕ್ತಿಯನ್ನು ಅಮಾನತುಗೊಳಿಸಬೇಕು. ಅನಂತರ ಅವರ ಕ್ಷೇತ್ರದಲ್ಲಿ ಮರು ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು.

ಉಪವಾಸ ಸತ್ಯಾಗ್ರಹದಲ್ಲಿ ಎಸ್‌ಎಫ್‌ಐ ರಾಜ್ಯ ಸಹ ಕಾರ್ಯದರ್ಶಿ ಸಿ.ಅಮರೇಶ್, ಡಿವೈಎಫ್‌ಐ ಮುಖಂಡ ಬಸವರಾಜ ಪೂಜಾರ, ವೇದಿಕೆ ಮುಖಂಡರಾದ ರಾಘವೇಂದ್ರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News