ಬೆಂಗಳೂರು: ವಕ್ಫ್ ಆಸ್ತಿ ರಕ್ಷಣೆಗೆ ಮುಂದಾಗದಿದ್ದರೆ ಡಿಸಿ ಕಚೇರಿಗೆ ಮುತ್ತಿಗೆ ಎಚ್ಚರಿಕೆ

Update: 2018-02-20 14:02 GMT

ಬೆಂಗಳೂರು, ಫೆ.20: ರಾಜ್ಯದಲ್ಲಿ ವಕ್ಫ್ ಆಸ್ತಿ ರಕ್ಷಣೆಗೆ ಮುಂದಾಗದಿದ್ದಲ್ಲಿ ಪ್ರತಿ ಜಿಲ್ಲಾಧಿಕಾರಿಗಳ ಕಚೇರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಮುಸ್ಲಿಮರ(ವಕ್ಫ್) ಆಸ್ತಿ ಭ್ರಷ್ಟಾಚಾರ ಮುಕ್ತಿ ಮಹಾಸಭಾ ಎಚ್ಚರಿಕೆ ನೀಡಿದೆ.

ಮಂಗಳವಾರ ನಗರದ ಪುರಭವನದ ಎದುರು ಆಸ್ತಿ ಭ್ರಷ್ಟಾಚಾರ ಮುಕ್ತಿ ಮಹಾಸಭಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ವಕ್ಫ್ ಆಸ್ತಿಗಳನ್ನು ರಕ್ಷಣೆ ಮಾಡಬೇಕು. ಜೊತೆಗೆ ವಕ್ಫ್ ಆಸ್ತಿ ಕಬಳಿಕೆ ಮಾಡಿರುವ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಹಾಸಭಾದ ಮುಖ್ಯಸ್ಥ ಅನ್ವರ್ ಮಾಣಿಪ್ಪಾಡಿ, ಕಾಂಗ್ರೆಸ್ ಪಕ್ಷದ ಬಹುತೇಕ ಮುಸ್ಲಿಮ್ ಮುಖಂಡರು ಆಸ್ತಿ ಕಬಳಿಕೆಯಲ್ಲಿ ನೇರ ಭಾಗಿಯಾಗಿದ್ದು, ಕರ್ನಾಟಕದಲ್ಲಿ ಸುಮಾರು 30 ಲಕ್ಷ ಕೋಟಿಗೂ ಹೆಚ್ಚು ಬೆಲೆ ಬಾಳುವ ವಕ್ಫ್ ಆಸ್ತಿಗಳು ಅಕ್ರಮವಾಗಿ ಕಬಳಿಕೆಯಾಗಿವೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಕಬಳಿಕೆಯಾಗಿರುವ ಆಸ್ತಿಯನ್ನು ವಕ್ಫ್ ಮಂಡಳಿಗೆ ಹಿಂದಿರುಗಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಸರರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ರಾಜ್ಯ ಅಲ್ಪ ಸಂಖ್ಯಾತರ ಆಯೋಗ ರಾಜ್ಯದ ವ್ಯಾಪ್ತಿಯಲ್ಲಿರುವ ವಕ್ಫ್ ಆಸ್ತಿಗಳ ಕುರಿತು ಸಮೀಕ್ಷೆ ನಡೆಸಿ ಸುದೀರ್ಘ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ಈ ವರದಿಯನ್ನು ಲೋಕಾಯುಕ್ತ ಸಂಸ್ಥೆ ಎತ್ತಿ ಹಿಡಿದಿದೆ. ಜತೆಗೆ ಉಪ ಲೋಕಾಯುಕ್ತ ನ್ಯಾ.ಎನ್.ಆನಂದ ವರದಿಯ ಸಂಬಂಧ ವಿಚಾರಣೆ ನಡೆಸಿ ಅಕ್ರಮಕ್ಕೆ ಸಂಬಂಧಿಸಿದಂತೆ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಆದರೂ, ರಾಜ್ಯ ಸರಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News