ಸರ್ವಜ್ಞನ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳಿ: ಡಾ.ಎಲ್.ಜಿ. ಮೀರಾ

Update: 2018-02-20 14:05 GMT

ಬೆಂಗಳೂರು, ಫೆ.20: ಸರ್ವಜ್ಞ ಸರ್ವಕಾಲಕ್ಕೂ ಸಲ್ಲುವ ಕವಿ. ಹೀಗಾಗಿ, ಸರ್ವಜ್ಞನ ಜಯಂತಿಯನ್ನು ಸಂಭ್ರಮದಿಂದ ಆಚರಿಸುವುದರ ಜತೆಗೆ ಆತನ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಸಾಹಿತಿ ಡಾ.ಎಲ್.ಜಿ.ಮೀರಾ ಹೇಳಿದರು.

ಮಂಗಳವಾರ ನಗರದ ಕನ್ನಡಭವನದ ನಯನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸಂತ ಕವಿ ಸರ್ವಜ್ಞ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಪಂಪ, ರನ್ನರ ಕಾವ್ಯಗಳನ್ನು ನಿಘಂಟುಗಳಿಲ್ಲದೆ ಓದಲು ಸಾಧ್ಯವಿಲ್ಲ. ಆದರೆ ಸರ್ವಜ್ಞನನ್ನು ಓದಲು ಯಾವುದೇ ನಿಘಂಟು ಬೇಕಿಲ್ಲ. ದೇಸಿ ಆಡುಭಾಷೆ ಬಳಸಿ ತ್ರಿಪದಿಗಳನ್ನು ರಚಿಸಿ, ಸರ್ವಕಾಲಕ್ಕೂ ಸಲ್ಲುವ ಕವಿಯಾಗಿದ್ದಾನೆ ಎಂದರು.

ತ್ರಿಪದಿಯನ್ನು ಕನ್ನಡದ ಛಂದಸ್ಸಿನ ಗಾಯತ್ರಿಮಂತ್ರ ಎಂದು ಕರೆಯುತ್ತಾರೆ. ತ್ರಿಪದಿಯಲ್ಲಿ ಕನ್ನಡದ ಮಟ್ಟು, ಕನ್ನಡದ ಧಾಟಿ, ಕನ್ನಡದ ಜಾಯಮಾನವಿದೆ. ತ್ರಿಪದಿ ಮೂಲಕ ನೀತಿಯನ್ನು ಮಾತ್ರ ಹೇಳದೆ ಕನ್ನಡ ಕಟ್ಟುವ ಕೆಲಸವನ್ನು ಮಾಡಿದ್ದಾರೆ. ಇವತ್ತಿಗೂ ಕನ್ನಡ ಉಳಿದಿದ್ದರೆ ಅದಕ್ಕೆ ಸರ್ವಜ್ಞನ ತ್ರಿಪದಿಗಳೆ ಕಾರಣ ಎಂದು ಹೇಳಿದರು.

ಸರ್ವಜ್ಞ ಕವಿ ಹಾವೇರಿಯ ಅಬಲೂರಿನ ಕವಿ. ಅವರ ತಂದೆ ಮಾಸನೂರು ಬ್ರಾಹ್ಮಣ ತನಗೆ ಮಕ್ಕಳಿಲ್ಲ ಎಂದು ವರಪ್ರಸಾದ ಪಡೆಯಬೇಕೆಂದು ಕಾಶಿಗೆ ಹೋಗಿ ಬರುವಾಗ ಅಬಲೂರಿನಲ್ಲಿ ಒಬ್ಬ ಮಾಳಮ್ಮ ಎಂಬ ಕುಂಬಾರಗಿತ್ತಿಯ ಮನೆಯಲ್ಲಿ ತಂಗಿದಾಗ ಸರ್ವಜ್ಞ ಜನಿಸಿದ ಎಂದು ನಾವು ಓದಿದ್ದೇವೆ. ಹೀಗಾಗಿ ಸರ್ವಜ್ಞನನ್ನು ಕುಂಬಾರನ ಕುಲದಲ್ಲಿ ಗುರುತಿಸುವ ಪರಂಪರೆ ಇದೆ. ಸರ್ವಜ್ಞ ಆ ಕಾಲದಲ್ಲಿ ಜಾತಿ ಭೇದದ ಅನೇಕ ಕಷ್ಟ ತೊಂದರೆಗೆ ಒಳಗಾಗಿರಬೇಕು. ಹಾಗಾಗಿ ಜಾತಿಯನ್ನು ಕುರಿತು ಅನೇಕ ತ್ರಿಪದಿಯನ್ನು ಬರೆದಿದ್ದಾನೆ. ಸರ್ವಜ್ಞನ ಕಾಲದ ಸಾಹಿತ್ಯವನ್ನು ಗಮನಿಸಿದರೆ ಅದು ದೇಸಿ ಸಾಹಿತ್ಯ ವಿಜೃಂಭಿಸಿದ ಕಾಲ ಎನ್ನಬಹುದು ಎಂದು ಅಭಿಪ್ರಾಯಿಸಿದರು.

ಸರ್ವಜ್ಞ ತನ್ನ ತ್ರಿಪದಿಯಲ್ಲಿ ಅತ್ಯುತ್ತಮ ಪದವನ್ನು ಅತ್ಯುತ್ತಮ ರೀತಿಯಲ್ಲಿ ಜೋಡಿಸುವ ಕೆಲಸವನ್ನು ಮಾಡಿದ್ದಾನೆ. ಅದಕ್ಕಾಗಿಯೇ ಸರ್ವಜ್ಞ ನಮ್ಮ ಜನರ ಮನಸ್ಸಿನಲ್ಲಿ ನಿಂತುಕೊಂಡಿದ್ದಾನೆ. ಕವಿಯೊಬ್ಬ ತನ್ನ ಸ್ವಪ್ರತಿಭೆಯಿಂದ ಏಕಾಂಗಿಯಾಗಿ ನಿಂತು ಜನಪ್ರಿಯತೆಯ ಉತ್ತುಂಗ ಶಿಖರ ಏರಿರುವುದಕ್ಕೆ ಸ್ಪಷ್ಟ ಉದಾಹರಣೆ ಸರ್ವಜ್ಞ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್, ಜಾತಿಯ ಬಗ್ಗೆ ಎಲ್ಲಾ ಶರಣರು ಕೂಡ ಹೇಳಿದ್ದಾರೆ. ಇಡೀ ನಮ್ಮ ಸಾಹಿತ್ಯ ಮನುಷ್ಯ ಕೇಂದ್ರಿತವಾದ ಜಾತಿಯನ್ನು ಒಡೆದು ನಿಲ್ಲುವಂಥ ಸಾಹಿತ್ಯ ಪರಂಪರೆ ಸೃಷ್ಟಿ ಮಾಡಿದ ಮಹಾ ಕವಿಗಳನ್ನು ಯಾವುದೇ ಒಂದು ಜಾತಿ, ಸಮುದಾಯಕ್ಕೆ ಸೀಮಿತಗೊಳಿಸದೆ ವಿಶಾಲ ಮನೋಭಾವದಿಂದ ಕಾಣುವ ಗುಣ ರೂಢಿಸಿಕೊಳ್ಳಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಜಾನಪದ ಕಲಾತಂಡಗಳು ನೃತ್ಯ ಪ್ರದರ್ಶನ ಮಾಡಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News