ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ: ಎಂ.ಕೃಷ್ಣಪ್ಪ

Update: 2018-02-20 14:07 GMT

ಬೆಂಗಳೂರು, ಫೆ.20: ಮನುಷ್ಯನ ಬೌದ್ಧಿಕ ಜ್ಞಾನವನ್ನು ಹೆಚ್ಚಿಸುವಲ್ಲಿ ಪುಸ್ತಕಗಳು ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ಗ್ರಂಥಾಲಯವನ್ನು ಬಳಸುವ, ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ವಸತಿ ಸಚಿವ ಎಂ.ಕೃಷ್ಣಪ್ಪ ತಿಳಿಸಿದ್ದಾರೆ.

ಮಂಗಳವಾರ ಗ್ರಂಥಾಲಯ ಇಲಾಖೆ ವತಿಯಿಂದ ವಿಜಯನಗರದಲ್ಲಿ ನೂತನವಾಗಿ ನಿರ್ಮಿಸಿರುವ ಕಟ್ಟಡ ಉದ್ಘಾಟನೆ ಹಾಗೂ ಗ್ರಂಥಾಲಯಕ್ಕೆ ಎನ್.ಡಿ.ಬಗರಿಯವರ ಹೆಸರು ನಾಮಕರಣ ನೆರವೇರಿಸಿ ಅವರು ಮಾತನಾಡಿದರು.

ಜನರನ್ನು ನಂಬಿದರೆ ಮೋಸ ಹೋಗುವ ಸಂದರ್ಭ ಎದುರಾಗಬಹುದು. ಆದರೆ, ಪುಸ್ತಕಗಳನ್ನು ನಂಬಿ ಮೋಸ ಹೋಗಲು ಸಾಧ್ಯವಿಲ್ಲ. ಹೀಗಾಗಿ ಜನತೆ ಓದುವ ಹವ್ಯಾಸ ರೂಢಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದರು.

ಕರ್ನಾಟಕ ರಾಜ್ಯ ಗ್ರಂಥಾಲಯ ಇಲಾಖೆಯ ಮೊದಲ ನಿರ್ದೇಶಕರಾದ ಬಗರಿಯವರು ಅಂದಿನ ಕಾಲದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳದೆ ಜಿಲ್ಲಾ, ತಾಲೂಕು ಗ್ರಂಥಾಲಯಗಳನ್ನು ವಿಸ್ತರಿಸಿ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದ್ದಾರೆ. ಗ್ರಂಥಾಲಯ ಇಲಾಖೆಯಲ್ಲಿ ಅವರ ಸೇವೆ ಅನನ್ಯವಾದದ್ದು ಎಂದು ಸ್ಮರಿಸಿದರು.

ಪ್ರಸಕ್ತ ತಂತ್ರಜ್ಞಾನದ ಭರಾಟೆಯಲ್ಲಿ ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಹವ್ಯಾಸ ಕ್ಷೀಣಿಸುತ್ತಿದೆ. ಹೀಗಾಗಿ ಯುವಕರು ತಮ್ಮದೇ ಆದ ಲೋಕದಲ್ಲಿ ಕಳೆದು ಹೋಗಿದ್ದಾರೆ. ಇದರಿಂದ ಹೊರಬಂದು ಪುಸ್ತಕ ಜಗತ್ತಿಗೆ ಒಗ್ಗಿಕೊಳ್ಳಬೇಕೆಂದು ಕೃಷ್ಣಪ್ಪ ಕರೆ ನೀಡಿದರು.

ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ್‌ಕುಮಾರ್ ಹೊಸಮನಿ ಮಾತನಾಡಿ, ಬಗರಿಯವರು ಗ್ರಂಥಾಲಯ ಕಾಯ್ದೆ ಕಾರಣಕರ್ತರು. ಇವರ ಕಾರ್ಯವೈಖರಿ ಕಂಡು ಆಗಿನ ವಿದ್ಯಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಗ್ರಂಥಾಲಯ ಸೇವೆಯನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಎಚ್.ಎಂರೇವಣ್ಣ, ನಗರ ಕೇಂದ್ರ ಗ್ರಂಥಾಲಯ ಉಪನಿರ್ದೇಶಕ ಡಿ.ಎಚ್.ಕೇಸರಿ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News