ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿನ ರೈತರ ಸಾಲ ಮನ್ನಾ ಮಾಡಿ: ಜಗದೀಶ್ ಶೆಟ್ಟರ್

Update: 2018-02-20 14:30 GMT

ಬೆಂಗಳೂರು, ಫೆ.20: ರಾಜ್ಯ ಸರಕಾರವು ಕೇಂದ್ರ ಸರಕಾರದ ಕಡೆ ಬೊಟ್ಟು ಮಾಡದೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನಮ್ಮ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡಬೇಕು ಎಂದು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಒತ್ತಾಯಿಸಿದರು.

ಮಂಗಳವಾರ ವಿಧಾನಸಭೆಯಲ್ಲಿ ರಾಜ್ಯ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಕೆಲವು ದಿನಗಳಲ್ಲಿ ಒಂದು ಲಕ್ಷ ರೂ.ಗಳವರೆಗಿನ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಮಾಡಿದೆ. ಅದೇ ರೀತಿ ರಾಜ್ಯ ಸರಕಾರವು ದಿಟ್ಟ ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಹಕಾರಿ ಸಂಘಗಳಲ್ಲಿ ರೈತರು ಮಾಡಿದ 50 ಸಾವಿರ ರೂ.ವರೆಗಿನ ಸಾಲವನ್ನು 1 ಲಕ್ಷ ರೂ.ಗಳವರೆಗೆ ಬಜೆಟ್‌ನಲ್ಲಿ ಹೆಚ್ಚಳ ಮಾಡಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಈ ಹಿಂದೆ ಸರಕಾರ ಘೋಷಿಸಿದ್ದ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡಲು 8600 ಕೋಟಿ ರೂ.ಗಳ ಅಗತ್ಯವಿದೆ. ಆದರೆ, ಈವರೆಗೆ ಸರಕಾರ ಬಿಡುಗಡೆ ಮಾಡಿರುವುದು ಕೇವಲ 2600 ಕೋಟಿ ರೂ.ಗಳು ಮಾತ್ರ ಎಂದು ಅವರು ಟೀಕಿಸಿದರು.

ಸಹಕಾರಿ ಸಂಘಗಳಿಗೆ ಇನ್ನು 6 ಸಾವಿರ ಕೋಟಿ ರೂ.ಗಳನ್ನು ಸರಕಾರ ಭರಿಸಬೇಕಿದೆ. ಇನ್ನೆರಡು ತಿಂಗಳಲ್ಲಿ ಸರಕಾರದ ಅವಧಿ ಮುಗಿಯುತ್ತದೆ. ಈ ಹಣವನ್ನು ಯಾರು ತುಂಬುತ್ತಾರೆ. ಮುಂದಿನ ಸರಕಾರದ ಮೇಲೆ ಈ ಹೊರೆಯನ್ನು ವರ್ಗಾಯಿಸಲಾಗುತ್ತದೆ ಎಂದು ಶೆಟ್ಟರ್ ಹೇಳಿದರು.

ಚುನಾವಣೆ ನಂತರ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತದೆ. ರೈತರ ಹಿತದೃಷ್ಟಿಯಿಂದ ಆ ಹಣವನ್ನು ನಾವು ಭರಿಸುತ್ತೇವೆ ಎಂದು ಜಗದೀಶ್ ಶೆಟ್ಟರ್ ಹೇಳುತ್ತಿದ್ದಂತೆ, ನೀವು ಯಾವುದೆ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ. ಯಾರು ಅಧಿಕಾರಕ್ಕೆ ಬರಬೇಕು ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ ಎಂದು ಕಾಂಗ್ರೆಸ್ ಸದಸ್ಯರು ತಿರುಗೇಟು ನೀಡಿದರು.

ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ 13 ಬಜೆಟ್‌ಗಳನ್ನು ಮಂಡಿಸಿದ್ದರು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ 13 ಬಜೆಟ್‌ಗಳನ್ನು ಮಂಡಿಸುವ ಮೂಲಕ ಅವರ ದಾಖಲೆಯನ್ನು ಸರಿದೂಗಿಸಿದ್ದಾರೆ. ಆದರೆ, ಇಷ್ಟೊಂದು ಅನುಭವ ಇರುವ ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ, ಬಜೆಟ್‌ನಲ್ಲಿ ತಮ್ಮ ಸಾಧನೆಯೊಂದಿಗೆ ಹಿಂದಿನ ಸರಕಾರ ವಿವಿಧ ಇಲಾಖೆಗಳಿಗೆ ನೀಡಿದ್ದ ಅನುದಾನದ ಪ್ರಮಾಣವನ್ನು ಉಲ್ಲೇಖಿಸುವ ಅಗತ್ಯವಿತ್ತೇ ಎಂದು ಅವರು ಪ್ರಶ್ನಿಸಿದರು.

ಅನುದಾನದ ಪ್ರಮಾಣವನ್ನು ಲೆಕ್ಕ ಹಾಕುವ ಅಗತ್ಯವಿದ್ದರೆ ಕೇವಲ ಹಿಂದಿನ ನಮ್ಮ ಸರಕಾರದ ಅವಧಿಯೆ ಏಕೆ, ಅದಕ್ಕಿಂತ ಹಿಂದೆ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಯಾಗಿದ್ದ ಅವಧಿಯಲ್ಲಿ ನೀಡಿದ್ದ ಅನುದಾನಗಳ ಪ್ರಮಾಣದ ಬಗ್ಗೆ ಯಾಕೆ ಹೊಂದಿಸಿ ನೋಡಲಿಲ್ಲ ಎಂದು ಜಗದೀಶ್ ಶೆಟ್ಟರ್ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News