ಕನ್ನಡ ಕಲಿಸದ ಶಾಲೆಗಳ ಎನ್‌ಒಸಿ ರದ್ದು: ತನ್ವೀರ್ ಸೇಠ್

Update: 2018-02-20 15:24 GMT

ಬೆಂಗಳೂರು, ಫೆ.20: ಮುಂದಿನ ಶೈಕ್ಷಣಿಕ ಸಾಲಿನಿಂದ ಒಂದು ಭಾಷೆಯಾಗಿ ಕನ್ನಡವನ್ನು ಕಲಿಸದ ಸಿಬಿಎಸ್ಸಿ ಸೇರಿದಂತೆ ಖಾಸಗಿ ಶಾಲೆ ಹಾಗೂ ಕೇಂದ್ರಾಡಳಿತ ಶಾಲೆಗಳ ಎನ್‌ಒಸಿ ರದ್ದು ಪಡಿಸಲಾಗುವುದು ಎಂದು ಶಿಕ್ಷಣ ಸಚಿವ ತನ್ವೀರ್ ಸೇಠ್ ಎಚ್ಚರಿಕೆ ನೀಡಿದರು.

ಮಂಗಳವಾರ ವಿಧಾನಪರಿಷತ್‌ನಲ್ಲಿ 330 ರಡಿಯಲ್ಲಿ ಮಂಡಿಸಿದ ಸೂಚನ ಪತ್ರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ನೆಲೆಗೊಂಡಿರುವ ಯಾವುದೇ ಶಾಲೆ ಇಲ್ಲಿನ ಮಾತೃ ಭಾಷೆಯನ್ನು ಕಲಿಸುವುದು ಕಡ್ಡಾಯ. ಇದರಿಂದ ಯಾವುದೆ ವಿನಾಯಿತಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಮೊದಲು ಸಿಬಿಎಸ್ಸಿ ಹಾಗೂ ರೆಸಿಡೆನ್ಸಿ ಶಾಲೆಗಳು ರಾಜ್ಯ ಶಿಕ್ಷಣ ಇಲಾಖೆಯಡಿ ಇರಲಿಲ್ಲ. ಹೀಗಾಗಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಬೇಕೆಂದು ಹೇಳಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಶಿಕ್ಷಣ ಕಾಯ್ದೆಗೆ ತಿದ್ದುಪಡಿ ತಂದು ರಾಜ್ಯದಲ್ಲಿರುವ ಎಲ್ಲ ಖಾಸಗಿ ಶಾಲೆಗಳು ಶಿಕ್ಷಣ ಇಲಾಖೆಯಡಿಗೆ ಬರಲಿದ್ದು, ಕನ್ನಡ ಭಾಷೆಯಾಗಿ ಕಲಿಸುವುದು ಕಡ್ಡಾಯವಾಗಿದೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರದ ನೀತಿ ಆಯೋಗವು ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರ ಅಳವಡಿಸಿಕೊಳ್ಳುವಂತೆ ಸೂಚಿಸಿದೆ. ಆದರೆ, ರಾಜ್ಯದಲ್ಲಿ ಈಗಾಗಲೆ ತ್ರಿಭಾಷಾ ಸೂತ್ರ ಜಾರಿಯಲ್ಲಿದೆ. ಹೀಗಾಗಿ ಅದರ ಬಗ್ಗೆ ಹೆಚ್ಚು ಚರ್ಚೆಯ ಅಗತ್ಯವಿಲ್ಲ. ಪ್ರಾರಂಭದಲ್ಲಿ ಕನ್ನಡ ಕಲಿಸದ ಶಾಲೆಗಳಿಗೆ ದಂಡ ಹಾಕಿ ಕಪ್ಪು ಪಟ್ಟಿಗೆ ಸೇರಿಸಲಾಗುವುದು. ನಂತರ ಎನ್‌ಒಸಿ ರದ್ದು ಪಡಿಸುವಂತಹ ಕಠಿಣ ಕ್ರಮಕ್ಕೆ ಸರಕಾರ ಮುಂದಾಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ಅಲ್ಪಸಂಖ್ಯಾತ ಶಾಲೆ ಎಂದು ಘೋಷಿಸಿಕೊಂಡು ತೆರೆದಿರುವ ಶಾಲೆ, ಸಂಸ್ಥೆಗಳಲ್ಲಿ ಶೇ.25ರಷ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿರಬೇಕೆಂಬ ನಿಯಮವನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ರದ್ದು ಪಡಿಸುವ ಕುರಿತು ಚಿಂತಿಸಲಾಗುವುದು. ಶೇ.25ರಷ್ಟು ಕಡ್ಡಾಯ ನಿಯಮವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಅದರ ಅನ್ವಯ ಸಚಿವ ಸಂಪುಟದಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ತನ್ವೀರ್ ಸೇಠ್, ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News