30 ಲಕ್ಷ ಕುಟುಂಬಗಳಿಗೆ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆ: ಸಿದ್ದರಾಮಯ್ಯ

Update: 2018-02-20 15:30 GMT

ಬೆಂಗಳೂರು, ಫೆ.20: ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಿಂದ 30 ಲಕ್ಷ ಬಿಪಿಎಲ್ ಕುಟುಂಬಗಳಿಗೆ ಪ್ರಯೋಜನವಾಗಲಿದ್ದು, ಬಡಜನತೆಯನ್ನು ಹೊಗೆಯಿಂದ ಪಾರು ಮಾಡುವ ಮೂಲಕ ಆರೋಗ್ಯ ಹಾಗೂ ಪರಿಸರ ಸಂರಕ್ಷಣೆಗೆ ಸಹಕಾರಿಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ‘ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆ’ ಉದ್ಘಾಟಿಸಿ ಮಾತನಾಡಿದ ಅವರು, ಈಗಲೂ ಗ್ರಾಮೀಣ ಮಹಿಳೆಯರು ಹಸಿ ಸೌದೆ ಬಳಸಿ, ಹೊಗೆಯನ್ನು ಕುಡಿಯುತ್ತಲೇ ಅಡುಗೆ ಮಾಡುತ್ತಿದ್ದಾರೆ. ಇದನ್ನು ತಪ್ಪಿಸುವ ಸಲುವಾಗಿ ಅನಿಲಭಾಗ್ಯ ಯೋಜನೆಯನ್ನು ಜಾರಿ ಮಾಡಿದ್ದೇವೆ ಎಂದು ಹೇಳಿದರು.

ಶೇ.90ಮಂದಿ ಫಲಾನುಭವಿಗಳು: ಕಾಂಗ್ರೆಸ್ ಸರಕಾರ ಜಾರಿ ಮಾಡಿರುವ ಅನ್ನ ಭಾಗ್ಯ, ಕ್ಷೀರ ಭಾಗ್ಯ, ಕ್ಷೀರಧಾರೆ, ಮನಸ್ವಿನಿ, ಇಂದಿರಾ ಕ್ಯಾಂಟೀನ್ ಸೇರಿದಂತೆ ಒಂದಲ್ಲಾ ಒಂದು ಭಾಗ್ಯಗಳಲ್ಲಿ ರಾಜ್ಯದಲ್ಲಿ ಶೇ.90ರಷ್ಟು ಜನತೆ ಫಲಾನುಭವಿಗಳಾಗಿದ್ದಾರೆ. ಇದು ಈ ಹಿಂದಿನ ಯಾವ ಸರಕಾರದ ಅವಧಿಯಲ್ಲಿಯೂ ಆಗಿರಲಿಲ್ಲವೆಂದು ಅವರು ತಿಳಿಸಿದರು.

ಬಿಜೆಪಿ ಬುರುಡೆ ಗಿರಾಕಿಗಳು: ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಪ್ರತಿ ಕುಟುಂಬಕ್ಕೆ ತಲಾ ಏಳು ಕೆಜಿ ಅಕ್ಕಿಯನ್ನು ಉಚಿತವಾಗಿ ವಿತರಿಸುವ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಲಾಯಿತು. ಆ ಸಂದರ್ಭದಲ್ಲಿ ಬಿಜೆಪಿ ಈ ಯೋಜನೆಯನ್ನು ಟೀಕಿಸಿತು. ಆದರೆ, ಅನ್ನ ಭಾಗ್ಯ ಯೋಜನೆ ಯಶಸ್ವಿಯಾಗುತ್ತಿದ್ದಂತೆ, ಇದು ಕೇಂದ್ರ ಸರಕಾರದ ಯೋಜನೆ ಎಂದು ಬುರುಡೆ ಬಿಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

ಅನ್ನ ಭಾಗ್ಯ ಕೇಂದ್ರ ಸರಕಾರದ ಯೋಜನೆಯಾಗಿದ್ದರೆ ಬಿಜೆಪಿ ಆಡಳಿತವಿರುವ ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಾಸ್ಥಾನಗಳಲ್ಲಿ ಯಾಕೆ ಈ ಯೋಜನೆಯನ್ನು ಜಾರಿ ಮಾಡಿಲ್ಲ. ಮತ್ತೊಂದು ಸರಕಾರದ ಯೋಜನೆಯನ್ನು ತಮ್ಮದೆಂದು ಅಪಪ್ರಚಾರ ಮಾಡುವ ಬಿಜೆಪಿ ನಾಯಕರು ಬುರುಡೆ ಗಿರಾಕಿಗಳೆಂದು ಅವರು ವ್ಯಂಗ್ಯವಾಡಿದರು.

ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ನಗರಾಭಿವೃದ್ಧಿ ಸಚಿವ ರೋಷನ್‌ಬೇಗ್, ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಮೇಯರ್ ಸಂಪತ್‌ರಾಜ್ ಮತ್ತಿತರರಿದ್ದರು. ಸರಕಾರದ ಜನಪ್ರಿಯ ಭಾಗ್ಯಗಳಿಗೆ ಹೆಸರನ್ನು ಸೂಚಿಸಿದ ಹಿರಿಯ ಪತ್ರಕರ್ತ ವಿಲಾಸ್‌ಗೆ ಸನ್ಮಾನಿಸಲಾಯಿತು.

ಕೇಂದ್ರ ಸರಕಾರ ಜಾರಿ ಮಾಡಿರುವ ‘ಪ್ರಧಾನಮಂತ್ರಿ ಉಜ್ವಲ’ ಯೋಜನೆಯಲ್ಲಿ ಕೇವಲ ಒಂದು ಸಿಲಿಂಡರ್ ಮಾತ್ರ ಕೊಡುತ್ತಾರೆ. ಈ ಒಂದು ಸಿಲಿಂಡರ್‌ಗೆ ಅವರು ಖರ್ಚು ಮಾಡುವ ಹಣ ಕೇವಲ 1600ರೂ ಮಾತ್ರ. ಆದರೆ, ರಾಜ್ಯ ಸರಕಾರ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಎರಡು ಸಿಲಿಂಡರ್, ಗ್ಯಾಸ್‌ಸ್ಟೌವ್, ಲೈಟರ್ ಸಮೇತವಾಗಿ ಕೊಡುತ್ತಿದ್ದು, ಇದಕ್ಕಾಗಿ ಒಂದು ಕುಟುಂಬಕ್ಕೆ 4254ರೂ.ಖರ್ಚು ಮಾಡುತ್ತಿದ್ದೇವೆ.
-ಮುಖ್ಯಮಂತ್ರಿ ಸಿದ್ದರಾಮಯ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News