ಹೆಣ್ಣು ಮಕ್ಕಳ ಜೀವ ತಿನ್ನುವುದೇ ಈಶ್ವರಪ್ಪನವರ ಕೆಲಸ ಎಂದು ಸಿದ್ದರಾಮಯ್ಯ ಹೇಳಿದ್ದೇಕೆ?

Update: 2018-02-20 15:35 GMT

ಬೆಂಗಳೂರು, ಫೆ. 20: ಹೆಣ್ಣು ಮಕ್ಕಳ ಜೀವ ತಿನ್ನುವುದೇ ಈಶ್ವರಪ್ಪಅವರ ಕೆಲಸ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಪರಿಷತ್‌ನಲ್ಲಿಂದು ಈಶ್ವರಪ್ಪ ಅವರ ಕಾಲೆಳೆದ ಪ್ರಸಂಗ ನಡೆಯಿತು.

ತಾರಾ ಅನುರಾಧ ಅವರು ಪ್ರಶ್ನೋತ್ತರ ಸಮಯದಲ್ಲಿ ಪ್ರಶ್ನೆ ಕೇಳುತ್ತಿದ್ದ ವೇಳೆ ಉತ್ತರ ನೀಡಬೇಕಿದ್ದ ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಮುಖ್ಯಮಂತ್ರಿ ಅವರ ಜೊತೆ ಚರ್ಚೆಯಲ್ಲಿ ತೊಡಗಿದ್ದುದು ಈಶ್ವರಪ್ಪ ಗಮನಕ್ಕೆ ಬಂತು. ಈ ಸದನದಲ್ಲಿ ನಮ್ಮ ಪಕ್ಷದಲ್ಲಿ ತಾರಾ ಅನುರಾಧ ಅವರೊಬ್ಬರೇ ಇರುವುದು. ಅವರು ಪ್ರಶ್ನೆ ಕೇಳುವಾಗ ಗಮನಿಸದೆ, ಜೀವ ತಿನ್ನುತ್ತಿರಲ್ಲಾ ಎಂದು ಕೆಣಕಿದರು. ಅದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೆಣ್ಣುಮಕ್ಕಳ ಜೀವ ತಿನ್ನುವುದೇ ಈಶ್ವರಪ್ಪ ಅವರ ಕೆಲಸ, ನಮ್ಮ ಸರಕಾರ ಹೆಣ್ಣುಮಕ್ಕಳಿಗಾಗಿ ಮಾಡಿದಷ್ಟು ಯೋಜನೆಗಳನ್ನು ಬೇರೆ ಯಾವುದೇ ಸರಕಾರ ಮಾಡಿಲ್ಲ. ನಿನ್ನ ಆತ್ಮ ಮುಟ್ಟಿಕೊಂಡು ಹೇಳಮ್ಮಾ ಎಂದು ತಾರಾ ಅನುರಾಧ ಅವರನ್ನು ಕೆಣಕಿದರು.
ಅದಕ್ಕೆ ತಾರಾ ಕೇಳುವುದು ಬಹಳಷ್ಟು ಇದೆ, ಬಾಣಂತಿಯರಿಗೆ, ಗರ್ಭಿಣಿಯರಿಗೆ ಸೌಲಭ್ಯವೇ ಇಲ್ಲ ಎಂದು ತಿರುಗೇಟು ನೀಡಿದರು.

ಅಧಿಕಾರಕ್ಕೆ ನಾವೇ ಬರುತ್ತೇವೆ: ಹಾಪ್ ಕಾಮ್ಸ್ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ,  ಮುಂದಿನ ಸರಕಾರವು ಕೂಡಾ ನಮ್ಮದು. ಆಗ ನಿಮ್ಮ ಪ್ರಶ್ನೆಗೆ ಸೂಕ್ತ ಉತ್ತರ ನೀಡುತ್ತೇವೆ ಎಂದದ್ದು ಇನ್ನಷ್ಟು ಸ್ವಾರಸ್ಯಕರ ಚರ್ಚೆಗೆ ನಾಂದಿ ಹಾಡಿತು.

ಮಲ್ಲಿಕಾರ್ಜುನ್ ಅವರು ಮುಂದಿನ ಚುನಾವಣೆ ನಂತರ ನಮ್ಮ ಪಕ್ಷದಲ್ಲಿರುತ್ತಾರೆ ಎಂದು ಪ್ರತಿಪಕ್ಷದ ನಾಯಕ ಈಶ್ವರಪ್ಪಹೇಳಿದ್ದು, ಇಂಧನ ಸಚಿವ ಡಿ.ಕೆ. ಶಿವಕುಮಾರ್‌ಗೆ ಸರಿಕಾಣಲಿಲ್ಲ. ಮಲ್ಲಿಕಾರ್ಜುನ್ ಅವರು, ಮುಂದಿನ ಬಾರಿಯೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದ್ದು, ಪ್ರತಿಪಕ್ಷದವರಿಗೆ ಬಹಳ ಸಂತೋಷವಾಗಿದೆ, ನಮ್ಮ ಸರಕಾರ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಸಮರ್ಥಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News