ನಾಳೆ ಮುಹಮ್ಮದ್ ನಲಪಾಡ್‌ಗೆ ಜಾಮೀನು ಅಥವಾ ಜೈಲು?

Update: 2018-02-20 15:47 GMT

ಬೆಂಗಳೂರು, ಫೆ.20: ಪಾರ್ಟಿಯೊಂದರಲ್ಲಿ ವಿದ್ವತ್ ಎಂಬಾತನ ಮೇಲೆ ಗಂಭೀರ ಹಲ್ಲೆ ನಡೆಸಿರುವ ಪ್ರಕರಣ ಸಂಬಂಧ ಪೊಲೀಸರ ವಶದಲ್ಲಿರುವ ಶಾಸಕ ಎನ್.ಎ.ಹಾರಿಸ್ ಪುತ್ರ ಮುಹಮ್ಮದ್ ನಲಪಾಡ್‌ನ ಜಾಮೀನು ಅರ್ಜಿ ವಿಚಾರಣೆ ಫೆ.21 ರಂದು ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಲಿದ್ದು, ಜೈಲು ಶಿಕ್ಷೆಗೂ ಗುರಿಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಮಂಗಳವಾರ ತಮ್ಮ ವಕೀಲಯರ ಮೂಲಕ ಆರೋಪಿ ಮುಹಮ್ಮದ್ ನಲಪಾಡ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಇಂದು ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ನಡೆಯಲಿದೆ. ಗಂಭೀರ ಪ್ರಕರಣ ಹಿನ್ನಲೆ, ಜಾಮೀನು ನಿರಾಕರಿಸುವ ಸಾಧ್ಯತೆಗಳಿದ್ದು, ಜೈಲು ಶಿಕ್ಷೆಗೆ ನಲಪಾಡ್ ಗುರಿಯಾಗಿ, ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರಕ್ಕೂ ಸೇರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ವಿಚಾರಣೆ: ಮುಹಮ್ಮದ್ ನಲಪಾಡ್ ಹಾಗೂ ಆತನ ಆರು ಮಂದಿ ಸಹಚರರನ್ನು, ಠಾಣೆಯ ಲಾಕಪ್‌ನಲ್ಲಿಯೇ ಮಂಗಳವಾರವೂ ವಿಚಾರಣೆಗೊಳಪಡಿಸಲಾಯಿತು. ಪೊಲೀಸರ ಜತೆ ಎಂದಿನ ದಾಟಿಯಲ್ಲೇ ಮಾತನಾಡುತ್ತಿದ್ದಾನೆ. ಆತನಲ್ಲಿ ಪಶ್ಚಾತ್ತಾಪದ ಭಾವನೆ ಸ್ವಲ್ಪವೂ ಇರಲಿಲ್ಲ ಎಂದು ಹೇಳಲಾಗುತ್ತಿದೆ.

ವಿದ್ವತ್ ಮೂಳೆ ಮುರಿದಿವೆ: ಗಂಭೀರ ಹಲ್ಲೆಯಿಂದ ಗಾಯಗೊಂಡಿರುವ ದೇಹದ ಕೆಲ ಭಾಗಗಳ ಮೂಳೆಗಳು ಮುರಿದಿವೆ ಎಂದು ಮಲ್ಯ ಆಸ್ಪತ್ರೆ ವೈದ್ಯ ಡಾ.ಆನಂದ್ ಮಾಹಿತಿ ನೀಡಿದರು. ಎದೆಗೂಡಿನ 9 ಮೂಳೆಗಳು, ಮೂಗು ಹಾಗೂ ಬೆನ್ನು ಮೂಳೆಗಳು ಮುರಿದಿವೆ. ಶಸ್ತ್ರಚಿಕಿತ್ಸೆ ಮಾಡಿ ಅವುಗಳನ್ನು ಜೋಡಣೆ ಮಾಡಬೇಕಿದೆ. ಕಣ್ಣುಗಳ ಕೆಳಭಾಗದ ಮೂಳೆಗಳಿಗೂ ಹಾನಿಯಾಗಿದೆ. ಸಂಪೂರ್ಣವಾಗಿ ಗುಣಮುಖರಾಗಲು ಕನಿಷ್ಠ ಮೂರು ತಿಂಗಳು ಬೇಕು ಎಂದು ತಿಳಿಸಿದರು.

ಮನೆಯಿಂದ ಊಟ: ಬಾಲ್ಯ ಸ್ನೇಹಿತ ವಿದ್ವತ್ ಹಾಗೂ ಆಸ್ಪತ್ರೆಯಲ್ಲಿರುವ ಆತನ ಸಂಬಂಧಿಕರಿಗೆ ಡಾ.ರಾಜ್‌ಕುಮಾರ್ ಮೊಮ್ಮಗ ಗುರು ರಾಘವೇಂದ್ರ ರಾಜ್‌ಕುಮಾರ್ ಮನೆಯಿಂದ ಊಟ ತಂದು ನೀಡಿದರು.

ವಿದ್ವತ್‌ನನ್ನು ಬಾಲ್ಯದಿಂದಲೂ ನೋಡತ್ತಿದ್ದೇನೆ. ಯಾರೂ ಜಗಳವಾಡಬಾರದು. ತಪ್ಪುಮಾಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು.
-ಪುನೀತ್ ರಾಜ್‌ಕುಮಾರ್, 

ನಟ ಮಝೀರ್ ಬಂಧನ
ಕಬ್ಬನ್ ಪಾರ್ಕ್ ಠಾಣೆ ಬಳಿ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ಮಾಡಿದ ಆರೋಪದಡಿ ಅಶೋಕನಗರದ ಮಝೀರ್ (27) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News