ಕೂಡಲಸಂಗಮದ ‘ಕ್ಲಿಪ್ಪಿಂಗ್’: ಮುಖ್ಯಮಂತ್ರಿ-ಕಾರಜೋಳ ನಡುವೆ ಜಟಾಪಟಿ

Update: 2018-02-20 15:52 GMT

ಬೆಂಗಳೂರು, ಫೆ. 20: ನೀರಾವರಿಗೆ ಅನುದಾನ ನೀಡುವ ಸಂಬಂಧ ಕೂಡಲ ಸಂಗಮದಲ್ಲಿ ಸಿದ್ದರಾಮಯ್ಯ ನೀಡಿದ್ದ ‘ಹೇಳಿಕೆಯ ಕ್ಲಿಪ್ಪಿಂಗ್ ನನ್ನ ಬಳಿ ಇದೆ’ ಎಂಬ ಬಿಜೆಪಿ ಸದಸ್ಯ ಗೋವಿಂದ ಕಾರಜೋಳ ವಿಧಾನಸಭೆಯಲ್ಲಿ ಉಲ್ಲೇಖಿಸಿದ್ದು, ಸಿಎಂ ಹಾಗೂ ಕಾರಜೋಳ ನಡುವೆ ಕೆಲಕಾಲ ತೀವ್ರ ಜಟಾಪಟಿಗೆ ಕಾರಣವಾಯಿತು.

ಮಂಗಳವಾರ ಭೋಜನ ವಿರಾಮದ ನಂತರ ಸದನ ಸಮಾವೇಶಗೊಳ್ಳುತ್ತಿದ್ದಂತೆ ಸ್ಪೀಕರ್ ಕೋಳಿವಾಡ ಬಜೆಟ್ ಮೇಲಿನ ಚರ್ಚೆಗೆ ಅವಕಾಶ ನೀಡಿದರು. ಈ ವೇಳೆ ಮಾತನಾಡಿದ ಕಾರಜೋಳ, ಬಳ್ಳಾರಿ ಜಿಲ್ಲೆ ಹೊಸಪೇಟೆಯಿಂದ ಕೂಡಲಸಂಗಮಕ್ಕೆ ಪಾದಯಾತ್ರೆ ನಡೆಸಿದ ಕಾಂಗ್ರೆಸ್ ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿ ವರ್ಷ 10 ಸಾವಿರ ಕೋಟಿ ರೂ.ಅನುದಾನ ನೀಡುವ ಭರವಸೆ ನೀಡಿತ್ತು. ಆದರೆ, ಈ ಸರಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಇವರ ಸುಳ್ಳು ಮಾತು ನಂಬಿ ಅಖಂಡ ಬಿಜಾಪುರದ ಜನ 15 ಕ್ಷೇತ್ರದ ಪೈಕಿ 13ಮಂದಿ ಕಾಂಗ್ರೆಸ್ ಶಾಸಕರು ಚುನಾಯಿಸಿದ್ದಾರೆ. ಕೃಷ್ಣಾ ಮೇಲ್ದಂಡೆಗೆ ಅನುದಾನ ನೀಡುವ ಬಗ್ಗೆ ಸಿದ್ದರಾಮಯ್ಯರ ಹೇಳಿಕೆ ಕ್ಲಿಪ್ಪಿಂಗ್ ನನ್ನ ಬಳಿ ಇದೆ ಎಂದು ಉಲ್ಲೇಖಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ನೀರಾವರಿಗೆ ಪ್ರತಿ ವರ್ಷ 10 ಕೋಟಿ ರೂ.ನೀಡುತ್ತೇವೆಂದು ಹೇಳಿದ್ದೆವು. ಅದೇ ರೀತಿ ಅನುದಾನ ನೀಡಲಾಗಿದೆ. ಈ ಬಗ್ಗೆ ದಾಖಲೆ ಇದ್ದರೆ ಕೊಡಿ ಎಂದು ಗೋವಿಂದ ಕಾರಜೋಳ ಅವರ ಕಾಲೆಳೆದರು.

ಬಳಿಕ ಪ್ರತಿಕ್ರಿಯಿಸಿದ ಕಾರಜೋಳ, ನನ್ನ ಬಳಿಕ ವೀಡಿಯೋ ಕ್ಲಿಪ್ಪಿಂಗ್, ಪೇಪರ್ ಕಟ್ಟಿಂಗ್ಸ್ ಇವೆ. ಈಗ ನನ್ನ ಬಳಿ ಇಲ್ಲ. ಬೇಕಿದ್ದರೆ ತಂದು ಕೊಡುತ್ತೇನೆ ಎಂದು ಸವಾಲು ಹಾಕಿದರು. ಆಗ ಸದನಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಜೋಳ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಕಲ್ಲುಗುಂಡಿನಂತೆ ನಾನು ಇಲ್ಲೆ ಇದ್ದೇನೆ: ‘ಭಾಷಣ ಮಾಡಿದ್ದ ನಾನೇ ಕಲ್ಲುಗುಂಡಿನಂತೆ ಇಲ್ಲೇ ಇದ್ದೇನೆ. ಅಧಿಕಾರಕ್ಕೆ ಬಂದರೆ ನೀರಾವರಿಗೆ ಪ್ರತಿವರ್ಷ 10 ಸಾವಿರ ಕೋಟಿ ರೂ.ನಂತೆ ಐದು ವರ್ಷದಲ್ಲಿ 50 ಸಾವಿರ ಕೋಟಿ ರೂ. ಅನುದಾನ ನೀಡುತ್ತೇವೆ ಎಂದು ಭರವಸೆ ನೀಡಿದ್ದೇವೆ. ನಿಮ್ಮ ಬಳಿ ನನ್ನ ಹೇಳಿಕೆ ಕ್ಲಿಪ್ಪಿಂಗ್ ಇದ್ದರೆ ಕೊಡಿ’ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

‘ಪೇಪರ್ ಕಟ್ಟಿಂಗ್ ಇದೆ ಬೇಕಾದರೆ ಕೊಡ್ತೀನಿ’ ಎಂದು ಕಾರಜೋಳ ಹೇಳಿದಾಗ, ಅದನ್ನು ತಳ್ಳಿಹಾಕಿದ ಸಿದ್ದರಾಮಯ್ಯ, ‘ಕ್ಲಿಪ್ಪಿಂಗ್ ಇದೆ, ಕೊಡ್ತೀನಿ ಅಂತ ಹೇಳಿದ್ದೀರಿ ಕ್ಲಿಪ್ಪಿಂಗ್ ಕೊಡಿ’ ಎಂದು ಪಟ್ಟು ಹಿಡಿದರು. ಆರೋಪ ಮಾಡಿದವರೆ ಸಾಕ್ಷಿ ನೀಡಬೇಕು. ಐದು ವರ್ಷಗಳಿಂದ ಇದನ್ನೇ ಹೇಳುತ್ತಿದ್ದೀರಿ’ ಎಂದು ತಿರುಗೇಟು ನೀಡಿದರು.

ಬಿಜೆಪಿ ಐದು ವರ್ಷ ಅವಧಿಯಲ್ಲಿ ನೀರಾವರಿಗೆ ಕೇವಲ 18 ಸಾವಿರ ಕೋಟಿ ರೂ.ಖರ್ಚು ಮಾಡಿದೆ. ಆದರೆ, ನಮ್ಮ ಸರಕಾರ 45 ಸಾವಿರ ಕೋಟಿ ರೂ.ಖರ್ಚು ಮಾಡಿದೆ. ಕಾರಜೋಳ, ನಿಮ್ಮ ಅವಧಿಯಲ್ಲಿ ನೀವೇ ಸಣ್ಣ ನೀರಾವರಿ ಸಚಿವರು, ಎಷ್ಟು ಹಣ ಖರ್ಚು ಮಾಡಿದ್ದೀರಿ, ಮಾಹಿತಿ ಕೊಡಿ ಎಂದು ಚುಚ್ಚಿದರು.

‘ರೈಟ್ ಪರ್ಸನ್ ಇನ್‌ದಿ ರಾಂಗ್ ಪಾರ್ಟಿ ಎಂಬಂತೆ ಕಾರಜೋಳ ಒಳ್ಳೆಯ ವ್ಯಕ್ತಿ, ಕೋಮುವಾದಿ ಪಕ್ಷಕ್ಕೆ ಸೇರಿದ್ದಾರೆ. ಸಂಘ ಪರಿವಾರದ ಸಂಸ್ಕೃತಿ ಅವರಿಗೆ ಬಂದಂತೆ ಇದೆ’
-ಸಿದ್ದರಾಮಯ್ಯ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News