ಜಾತಿ-ಧರ್ಮಗಳನ್ನು ಮೀರಿದ್ದು ರಂಗಭೂಮಿ: ಡಾ.ಚಂದ್ರಶೇಖರ ಕಂಬಾರ

Update: 2018-02-20 15:58 GMT

ಬೆಂಗಳೂರು, ಫೆ.20: ಪ್ರಪಂಚದಲ್ಲಿ ನಾಟಕ ರಂಗ ಇರುವುದು ಒಂದೇ. ಅದು ಪ್ರೇಕ್ಷರಕರನ್ನು ಯಾವುದೇ ಜಾತಿ, ಧರ್ಮ, ಮತ ಎಂಬ ಭೇದ-ಭಾವವಿಲ್ಲದ ಲೋಕವನ್ನು ಮೀರಿದ ಅನುಭವ ಕಲ್ಪಿಸಿಕೊಡುತ್ತದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಅಭಿಪ್ರಾಯಿಸಿದ್ದಾರೆ.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಥಿಯೇಟರ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾಟಕ ಎಂಬುದು ಎಲ್ಲ ಜಾತಿ, ಧರ್ಮಗಳನ್ನು ಮೀರಿರುತ್ತದೆ. ಎಲ್ಲರಿಗೂ ಸಂತೋಷ ಕಲ್ಪಿಸುತ್ತದೆ. ಅಲ್ಲದೆ, ಅದಕ್ಕೆ ಎಲ್ಲ ಧರ್ಮ, ಜಾತಿಗಳ ನಡುವಿನ ತಾರತಮ್ಯವನ್ನು ಪ್ರಶ್ನೆ ಮಾಡುವ ಶಕ್ತಿಯಿದೆ ಎಂದು ಹೇಳಿದರು.

ಇಂದಿನ ನಾಟಕಕಾರರ ಮೇಲೆ ರಂಗಭೂಮಿಯನ್ನು ಉಳಿಸುವ ಬಹುದೊಡ್ಡ ಜವಾಬ್ದಾರಿಯಿದೆ. ಹೀಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಹೊಸ ನಾಟಕಗಳನ್ನು ರಂಗಕ್ಕೆ ಅಳವಡಿಸಬೇಕು. ಹಳೆ ನಾಟಕಗಳನ್ನೇ ಮರು ಪ್ರದರ್ಶನ ಮಾಡುವ ಬದಲಿಗೆ, ಹೆಚ್ಚು ಹೆಚ್ಚು ಹೊಸ ನಾಟಕಗಳನ್ನು ಪ್ರದರ್ಶಿಸಬೇಕು. ಅಲ್ಲದೆ, ನಾಟಕಗಳು ಒಂದು ಧರ್ಮ, ಜಾತಿ, ವ್ಯವಸ್ಥೆಗೆ ಕೇಂದ್ರಿತವಾಗಬಾರದು. ಹೆಚ್ಚಿನ ಮಟ್ಟದಲ್ಲಿ ಮಹಿಳೆಯರು ರಂಗಭೂಮಿಯಲ್ಲಿ ತೊಡಗಿಕೊಳ್ಳುವಂತೆ ಉತ್ತೇಜಿಸಬೇಕು ಎಂದು ಅವರು ಸಲಹೆ ನೀಡಿದರು.

ರಂಗ ನಿರ್ದೇಶಕ ಸಿ.ಬಸವಲಿಂಗಯ್ಯ ಮಾತನಾಡಿ, ಸ್ನೇಹ ಧ್ವಜ ಎಂಬ ಸಂದೇಶದೊಂದಿಗೆ ಈ ನಾಟಕೋತ್ಸವ ಹಮ್ಮಿಕೊಂಡಿದ್ದು, ಮಾ.6 ರವರೆಗೂ ಈ ಉತ್ಸವ ನಡೆಯುತ್ತದೆ. ವಿಶ್ವದ ವಿವಿಧ 24 ನಾಟಕಗಳು ಉತ್ಸವದಲ್ಲಿ ಪ್ರದರ್ಶನಗೊಳ್ಳಲಿದ್ದು, ದೇಶದ 60ಕ್ಕೂ ಅಧಿಕ ರಂಗಕರ್ಮಿಗಳು ಹಾಗೂ ಅನುಭವಿ ತಜ್ಞರಿಂದ ಕಾರ್ಯಾಗಾರ, ಸಂವಾದ ಕಾರ್ಯಕ್ರಮಗಳು ನಗರದ ಕಲಾಗ್ರಾಮದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News