ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ: ಟಿ.ಬಿ.ಜಯಚಂದ್ರ

Update: 2018-02-20 16:03 GMT

ಬೆಂಗಳೂರು, ಫೆ.20: ನಮ್ಮ ಸರಕಾರದ ಐದು ವರ್ಷಗಳ ಆಡಳಿತಾವಧಿಯಲ್ಲಿ ಯಾವ ಭ್ರಷ್ಟಾಚಾರದ ಆರೋಪವು ಇಲ್ಲ. ಒಬ್ಬರೂ ಜೈಲಿಗೆ ಹೋಗಿಲ್ಲ. ಬಿಜೆಪಿಯವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿರುಗೇಟು ನೀಡಿದರು.

ಮಂಗಳವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ರಾಜ್ಯ ಸರಕಾರವು ಭ್ರಷ್ಟಾಚಾರ ಹಾಗೂ ಅಪರಾಧ ಪ್ರಕರಣಗಳಲ್ಲಿ ರಾಜ್ಯವನ್ನು ಮೊದಲ ಸ್ಥಾನಕ್ಕೆ ತಂದಿದೆ ಎಂದು ಟೀಕಿಸಿದರು.

ಇದಕ್ಕೆ ತಿರುಗೇಟು ನೀಡಿದ ಜಯಚಂದ್ರ, ನಮ್ಮ ವಿರುದ್ಧ ಒಂದು ಭ್ರಷ್ಟಾಚಾರ ಆರೋಪವನ್ನು ಸಾಬೀತುಪಡಿಸಲು ನಿಮಗೆ ಸಾಧ್ಯವಾಗಿಲ್ಲ. ಜೈಲಿಗೆ ಹೋಗಿ ಬಂದವರನ್ನು ಜೊತೆಯಲ್ಲಿ ಕೂರಿಸಿಕೊಂಡಿರುವ ನಿಮಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ ಎಂದರು.

ಐಟಿ, ಬಿಟಿ ರಫ್ತಿಯಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ ಎಂದು ಜಾಹೀರಾತು ಫಲಕಗಳನ್ನು ಅಳವಡಿಸಲಾಗಿದೆ. ಜೆ.ಎಚ್.ಪಟೇಲ್, ಎಸ್.ಎಂ.ಕೃಷ್ಣ ಸರಕಾರದ ಅವಧಿಯಿಂದಲೂ ಕರ್ನಾಟಕವು ಐಟಿ, ಬಿಟಿ ರಫ್ತಿಯಲ್ಲಿ ಪ್ರಥಮ ಸ್ಥಾನದಲ್ಲಿದೆ. ನಿಮ್ಮ ಸರಕಾರದ ಕೊಡುಗೆ ಇದರಲ್ಲಿ ಏನಿದೆ? ನೀವು ಏಕೆ ಅದರ ಶ್ರೇಯಸ್ಸನ್ನು ಪಡೆಯಲು ಯತ್ನಿಸುತ್ತಿದ್ದೀರಾ ಎಂದು ಶೆಟ್ಟರ್ ಕಿಚಾಯಿಸಿದರು.

ಕೈಗಾರಿಕಾ ಬಂಡವಾಳ ಆಕರ್ಷಣೆಯಲ್ಲಿ ಪ್ರಥಮ ಸ್ಥಾನ ಎನ್ನುತ್ತೀದ್ದೀರಾ? ಆದರೆ, ಬಂಡವಾಳದ ಅನುಷ್ಠಾನದ ಪ್ರಮಾಣ ಕೇವಲ ಶೇ.15ರಷ್ಟು ಮಾತ್ರ ಆಗುತ್ತಿದೆ. ನಿಮ್ಮದೇನಿದ್ದರೂ ಅಪರಾಧ, ಭ್ರಷ್ಟಾಚಾರದಲ್ಲಿ ರಾಜ್ಯವನ್ನು ಪ್ರಥಮ ಸ್ಥಾನಕ್ಕೆ ತೆಗೆದುಕೊಂಡು ಹೋದದ್ದು ಎಂದು ಅವರು ಟೀಕಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಯಚಂದ್ರ, ನಿಮ್ಮ ಸರಕಾರದ ಐದು ವರ್ಷದ ಆಡಳಿತಾವಧಿಯಲ್ಲಿ ಎಷ್ಟು ಜನ ಜೈಲಿಗೆ ಹೋಗಿದ್ದರು. ನಮ್ಮ ಅವಧಿಯಲ್ಲಿ ಯಾರು ಭ್ರಷ್ಟಾಚಾರದ ಆರೋಪ ಹೊತ್ತು ಜೈಲಿಗೆ ಹೋಗಿದ್ದಾರೆ ಎಂಬುದನ್ನು ಅಂಕಿ ಅಂಶಗಳನ್ನು ಮುಂದಿಟ್ಟುಕೊಂಡು ಮಾತನಾಡಿ ಎಂದು ಸವಾಲು ಹಾಕಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ಉಪ ನಾಯಕ ಆರ್.ಅಶೋಕ್, ಮುಖ್ಯಮಂತ್ರಿ ವಿರುದ್ಧ ಎಸಿಬಿಯಲ್ಲಿ 47 ದೂರುಗಳು ದಾಖಲಾಗಿವೆ. ಒಂದು ದೂರಿನ ಬಗ್ಗೆಯೂ ತನಿಖೆ ಆರಂಭಿಸಿಲ್ಲ. ಅದೇ ನಮ್ಮ ವಿರುದ್ಧ ಯಾವುದಾದರೂ ದೂರು ದಾಖಲಾದರೆ ಅಂದೇ ಎಫ್‌ಐಆರ್ ದಾಖಲು ಮಾಡಿ, ತನಿಖೆ ಆರಂಭಿಸಲಾಗುತ್ತಿತ್ತು ಎಂದು ಆರೋಪಿಸಿದರು.

ರಾಮಕೃಷ್ಣ ಹೆಗಡೆ ಇಡೀ ದೇಶಕ್ಕೆ ಮಾದರಿಯಾಗುವ ಲೋಕಾಯುಕ್ತ ವ್ಯವಸ್ಥೆಯನ್ನು ತಂದರು. ಯಾರ ಅಧೀನಕ್ಕೂ ಒಳಪಡದೆ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿತ್ತು. ಆದರೆ, ನಿಮ್ಮ ಸರಕಾರ ಲೋಕಾಯುಕ್ತವನ್ನು ದುರ್ಬಲಗೊಳಿಸಿ, ಮುಖ್ಯಮಂತ್ರಿ ಅಧೀನದಲ್ಲಿರುವ ಎಸಿಬಿಯನ್ನು ಜಾರಿಗೆ ತಂದಿದೆ ಎಂದು ಅವರು ಟೀಕಿಸಿದರು.

ಲೋಕಾಯುಕ್ತ ಬಗ್ಗೆ ಮಾತನಾಡುವ ನೀವು, ಕೇಂದ್ರದಲ್ಲಿ ನಿಮ್ಮ ಸರಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷವಾದರೂ ಇನ್ನೂ ಏಕೆ ಲೋಕಪಾಲ್ ನೇಮಕ ಮಾಡಿಲ್ಲ. ಗುಜರಾತ್‌ನಲ್ಲಿ 9 ವರ್ಷಗಳ ಲೋಕಾಯುಕ್ತವನ್ನು ಯಾಕೆ ನೇಮಕ ಮಾಡಿರಲಿಲ್ಲ ಎಂದು ಅಶೋಕ್‌ಗೆ ಜಯಚಂದ್ರ ತಿರುಗೇಟು ನೀಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಅಶೋಕ್, ಲೋಕಪಾಲ್ ನೇಮಕ ಮಾಡುವುದು ಕೇಂದ್ರ ಸರಕಾರದ ಕೆಲಸ. ಸಂಸತ್ತಿನಲ್ಲಿ ನಿಮ್ಮ ಪಕ್ಷದ ಸಂಸದರು, ವಿರೋಧ ಪಕ್ಷದ ನಾಯಕರು ಯಾಕೆ ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ. ನಮ್ಮ ಪಕ್ಷದ ಶಾಸಕ ವೈ.ಎ.ನಾರಾಯಣಸ್ವಾಮಿ ನೀರಿನ ಬಗ್ಗೆ ಪಿಎಚ್‌ಡಿ ಮಾಡಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಾಯುಕ್ತವನ್ನು ಯಾವ ರೀತಿ ಮುಗಿಸಬೇಕು ಎಂಬುದರ ಬಗ್ಗೆ ಪಿಎಚ್‌ಡಿ ಮಾಡಿದ್ದಾರೆ ಎಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News