ಬೆಂಗಳೂರು: ಕೊಳಚೆ ಪ್ರದೇಶಗಳನ್ನು 94ಸಿಸಿ ವ್ಯಾಪ್ತಿಗೆ ಸೇರಿಸಲು ಒತ್ತಾಯಿಸಿ ಧರಣಿ

Update: 2018-02-20 16:42 GMT

ಬೆಂಗಳೂರು, ಫೆ.20: ರಾಜ್ಯದ ಸ್ಲಂ ನಿವಾಸಿಗಳಿಗೆ ಭೂ ಒಡೆತನ ಮತ್ತು ಮಾನವ ಘನತೆ ವಸತಿ ಹಕ್ಕು ಕಾಯಿದೆ ಜಾರಿಗೊಳಿಸಿ, ನಗರದ ಸ್ಥಳೀಯ ಸಂಸ್ಥೆಗಳ ಅಧೀನದಲ್ಲಿರುವ ಕೊಳಚೆ ಪ್ರದೇಶಗಳನ್ನು 94ಸಿಸಿ ವ್ಯಾಪ್ತಿಗೆ ಒಳಪಡಿಸಬೇಕೆಂದು ಸ್ಲಂ ಜನಾಂದೋಲನ ಕರ್ನಾಟಕ ಒತ್ತಾಯಿಸಿದೆ.

ಮಂಗಳವಾರ ನಗರದ ರೈಲ್ವೆ ನಿಲ್ದಾಣದಿಂದ ಮರೆವಣಿಗೆ ಜಾಥ ನಡೆಸಿದ ಜನಾಂದೋಲನದ ಪದಾಧಿಕಾರಿಗಳು ಹಾಗೂ ಸ್ಲಂ ನಿವಾಸಿಗಳು, ಸ್ವಾತಂತ್ರ ಉದ್ಯಾನವನದಲ್ಲಿ ಕರ್ನಾಟಕ ಸಮಗ್ರ ವಸತಿ ಹಕ್ಕು ಕಾಯಿದೆ ಜಾರಿ ಮಾಡಿ, ಕೊಳಚೆ ಪ್ರದೇಶಗಳನ್ನು 94 ಸಿಸಿ ವ್ಯಾಪ್ತಿಗೆ ಸೇರಿಸಿ ತರಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜನಾಂದೋಲನದ ರಾಜ್ಯ ಸಂಚಾಲಕ ನರಸಿಂಹಮೂರ್ತಿ, ಕರ್ನಾಟಕವನ್ನು ಗುಡಿಸಲು ಮುಕ್ತ ರಾಜ್ಯವನ್ನಾಗಿ ಮಾಡುವ ನಿಟ್ಟಿನಲ್ಲಿ ಸರಕಾರ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಮತ್ತು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಅನೇಕ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಆದರೆ, ಈ ಯೋಜನೆಗಳ ಉಪಯೋಗ ನಿಜವಾದ ಫಲಾನುಭವಿಗಳಿಗೆ ತಲುಪಿಲ್ಲ. ಸರಕಾರದ ಯೋಜನೆಗಳು ಕೇವಲ ಉಳ್ಳವರ ಪಾಲಾಗುತ್ತಿವೆ ಎಂದು ಆರೋಪಿಸಿದರು.

ಇತ್ತೀಚಿನ ಸರಕಾರಿ ದಾಖಲೆ ಪ್ರಕಾರ ರಾಜ್ಯದಲ್ಲಿ 69.39 ಲಕ್ಷ ಜನರು ವಸತಿ ರಹಿತರಿದ್ದಾರೆಂದು ಹೇಳಲಾಗಿದೆ. ಆದರೆ, ಸರಕಾರದ ಯೋಜನೆಗಳು ಯಾರ ಪಾಲಾಗುತ್ತಿವೆ ಎಂದು ಪ್ರಶ್ನಿಸಿದ ಅವರು, ಸಂವಿಧಾನದ ಮೂಲಭೂತ ಹಕ್ಕಿನಲ್ಲಿ ಬದುಕುವ ಹಕ್ಕನ್ನು ಖಾತ್ರಿ ಮಾಡಿದೆ. ಆದರೆ, ಆಡಳಿತ ನಡೆಸುವ ಸರಕಾಗಳು ವಸತಿಗಳನ್ನು ಯೋಜನೆಗಳಿಗೆ ಮಾತ್ರ ಸೀಮಿತ ಮಾಡಿವೆ. ಹೀಗಾಗಿ, ನಿರೀಕ್ಷಿಸದಷ್ಟು ಪ್ರಮಾಣದಲ್ಲಿ ವಸತಿ ಸಮಸ್ಯೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ದೂರಿದರು.

ರಾಜ್ಯದಲ್ಲಿರುವ 5,800 ಕೊಳಚೆ ಪ್ರದೇಶಗಳಲ್ಲಿ 2,802 ಕೊಳಚೆ ಪ್ರದೇಶಗಳನ್ನು ಅಧಿಕತವಾಗಿ ಘೋಷಣೆ ಮಾಡಲಾಗಿದೆ. ಅಂದಾಜು 70 ಲಕ್ಷಕ್ಕೂ ಅಧಿಕ ಜನರು ವಾಸಿಸಲು ಸಾಧ್ಯವಾಗದಂತಹ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಕೊಳಗೇರಿ ಪ್ರದೇಶದ ನಿವಾಸಿಗಳ ಅಭಿವೃದ್ಧಿಗೆ ಹೊಸ ಕಾನೂನು ರೂಪಿಸಲು ರಾಜ್ಯ ಸರಕಾರ ಮುಂದಾಗಿದ್ದು, ಅಲ್ಲಿನ ನಿವಾಸಿಗಳ ಜನಸಂಖ್ಯೆಗೆ ಅನುಗುಣವಾಗಿ ಮಾದರಿ ವಸತಿ ಹಕ್ಕು ಕಾಯಿದೆ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ಕೊಳಚೆ ಪ್ರದೇಶದಲ್ಲಿ 15 ವರ್ಷಗಳಿಂದ ವಾಸಿಸುತ್ತಿರುವವರಿಗೆ ಭೂ ಮಾಲಕತ್ವ ನೀಡಿ, ರಾಜ್ಯದಲ್ಲಿ ಸಮಗ್ರ ವಸತಿ ಹಕ್ಕು ಕಾಯ್ದೆ ಜಾರಿ ಮಾಡಬೇಕು. ನಿವೇಶನ ರಹಿತರ ಸಮಗ್ರ ಪರಿಹಾರಕ್ಕೆ ನಗರ ಪರಿಮಿತಿಯಲ್ಲಿ ಭೂಮಿಯನ್ನು ಮೀಸಲಿಡಬೇಕೆಂದು ಆಗ್ರಹಿಸಿದ ಅವರು, ನಮ್ಮ ಬೇಡಿಕೆಗಳನ್ನು ಈಡೇರಿಸುವ ಪಕ್ಷಗಳಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬೆಂಬಲಿಸುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News