ಇದು ಬಜೆಟ್ ಅಲ್ಲ, ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ: ಕಾರಜೋಳ

Update: 2018-02-20 16:53 GMT

ಬೆಂಗಳೂರು, ಫೆ. 20: ಓಟ್ ಬ್ಯಾಂಕ್ ರಾಜಕೀಯಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಜೆಟ್ ಎನ್ನುವಂತೆೆ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಿದ್ದಾರೆಂದು ಬಿಜೆಪಿ ಹಿರಿಯ ಸದಸ್ಯ ಗೋವಿಂದ ಕಾರಜೋಳ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಅಹಿಂದ ಹೋರಾಟದ ಮೂಲಕ ಬಂದ ಸಿಎಂ ಸಿದ್ದರಾಮಯ್ಯ ಗಾಂಧೀಜಿಯ ಕಲ್ಪನೆಯಂತೆ ಗ್ರಾಮ ಸ್ವರಾಜ್ಯ, ರಾಮರಾಜ್ಯ ಮಾಡುತ್ತಾರೆ ಎಂದು ನಾನು ನಂಬಿದ್ದೆ. ಆದರೆ, ಕರ್ನಾಟಕವೊಂದು ರಾವಣನ ರಾಜ್ಯವಾಗಿದೆ ಎಂದು ಟೀಕಿಸಿದರು.

ಕೃಷಿ, ನೀರಾವರಿ, ತೋಟಗಾರಿಕೆ, ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಸೂಕ್ತ ಅನುದಾನವನ್ನು ನೀಡಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ದೂರಿದ ಅವರು, ಮಹಿಳೆಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೆಗ್ಗಣಗಳ ಗೂಡಾಗಿದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಎಸ್ಸಿ-ಎಸ್ಟಿ ವರ್ಗಗಳ ಮೇಲೆ 10ಸಾವಿರಕ್ಕೂ ದೌರ್ಜನ್ಯ ಪ್ರಕರಣಗಳು ನಡೆದಿವೆ. ಹಿಂದಿನ ಅಧಿವೇಶನದಲ್ಲಿ ನನ್ನ ಕ್ಷೇತ್ರದ ದಲಿತ ಮಹಿಳೆ ನಾಪತ್ತೆ ಪ್ರಕರಣವನ್ನು ನಾನೇ ಪ್ರಸ್ತಾಪಿಸಿದ್ದೆ. ಆದರೆ, ಇಂದಿಗೂ ಪತ್ತೆ ಮಾಡಿಲ್ಲ. ಆಡಳಿತದಲ್ಲಿ ಬಿಗಿ ಇಲ್ಲ. ಬೆದರು ಬೊಂಬೆಯಂತೆ ಸರಕಾರ ಆಗಬಾರದು ಎಂದು ಚುಚ್ಚಿದರು.

ಮಲ್ಲಯ್ಯನ ಬೆಲ್ಲ: ನಮ್ಮ ಕಡೆ ಮಲ್ಲಯ್ಯ ದೇವರ ಬೆಲ್ಲ ಹಂಚಿಕೆ ಮಾಡಿದಂತೆ ರಾಜ್ಯದ 30 ಜಿಲ್ಲೆಗಳಿಗೂ ಬಜೆಟ್‌ನಲ್ಲಿ ಹಣ ಹಂಚಿಕೆ ಮಾಡಿದ್ದು, ಇದರಿಂದ ಜನರಿಗೆ ಏನೂ ಪ್ರಯೋಜನವಿಲ್ಲ ಎಂದ ಅವರು, ಸಂಪನ್ಮೂಲ ಕ್ರೋಡೀಕರಣ 1.62 ಲಕ್ಷ ಕೋಟಿ ರೂ.ಗಳು. ಆದರೆ, 2.09 ಲಕ್ಷ ಕೋಟಿ ರೂ.ಬಜೆಟ್ ಮಂಡಿಸಿದ್ದು, ಉಳಿದ ಮೊತ್ತ ಎಲ್ಲಿಂದ ತರ್ತೀರಿ ಎಂದು ಪ್ರಶ್ನಿಸಿದರು.

ಈಗಾಗಲೇ ಸರಕಾರ 2.50ಲಕ್ಷ ಕೋಟಿ ರೂ.ಸಾಲ ಮಾಡಿದೆ. ಸಾಲ ಮಾಡಿ ವಜ್ರದ ಹಾರ, ಚಿನ್ನದ ಕಿರೀಟ ತೊಟ್ಟರೆ ಸಾಲಗಾರ ಒಮ್ಮೆ ನಿಮ್ಮನ್ನು ಬೆತ್ತಲೆ ಮಾಡುತ್ತಾನೆ. ಆಗ ನಿಮ್ಮ ಸ್ಥಿತಿ ಗೊಮ್ಮಟೇಶ್ವರನಂತೆ ಆಗುತ್ತದೆ. ಹೀಗಾಗಿ ರಾಜ್ಯದ ಜನರನ್ನು ಬೆತ್ತಲು ಮಾಡಬೇಡಿ ಎಂದು ಸಲಹೆ ನೀಡಿದರು.

ಎಸ್ಸಿ-ಎಸ್ಟಿ, ಓಬಿಸಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋಬಳಿಗೊಂದು ವಸತಿ ಶಾಲೆ ಸ್ಥಾಪಿಸಬೇಕು. ರಾಜ್ಯದಲ್ಲಿ ಅಲ್ಪಸಂಖ್ಯಾತರ ಶೈಕ್ಷಣಿಕ ಉನ್ನತಿಗೆ ಹೆಚ್ಚಿನ ಅನುದಾನ ಮೀಸಲಿಡಬೇಕು. ನೇಕಾರರ ಸಾಲಮನ್ನಾ ಮಾಡಬೇಕೆಂದು ಗೋವಿಂದ ಕಾರಜೋಳ ಆಗ್ರಹಿಸಿದರು.

ಕಲಾಪಕ್ಕೆ ಕೋರಂ ಕೊರತೆ: ‘ಕೋರಂ ಕೊರತೆಯಿಂದ ವಿಧಾನಸಭೆ ಕಲಾಪ ಒಂದು ಗಂಟೆ ತಡವಾಗಿ ಆರಂಭವಾಯಿತು. ಆಡಳಿತ ಮತ್ತು ವಿಪಕ್ಷ ಸದಸ್ಯರು ಹಾಜರಾಗದೇ ಇದ್ದುದರಿಂದ 3 ಗಂಟೆಗೆ ಆರಂಭವಾಗಬೇಕಿದ್ದ ಕಲಾಪ ನಂತರ 4 ಗಂಟೆಗೆ ಪ್ರಾರಂಭವಾಯಿತು’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News