ಕೇಂದ್ರ ಸರಕಾರ ಸಹಕರಿಸಿದರೆ ತೊಗರಿ ಖರೀದಿ: ಟಿ.ಬಿ.ಜಯಚಂದ್ರ

Update: 2018-02-20 16:55 GMT

ಬೆಂಗಳೂರು, ಫೆ.20: ಕೇಂದ್ರ ಸರಕಾರವು ಮಧ್ಯಪ್ರವೇಶಿಸಿ ತೊಗರಿ ಖರೀದಿಗೆ ಅವಕಾಶ ನೀಡಬೇಕು. ಈ ಸಂಬಂಧ ಪ್ರಧಾನಿ ಸೇರಿದಂತೆ ಸಂಬಂಧಪಟ್ಟ ಕೇಂದ್ರ ಸಚಿವರಿಗೆ ಒಂದು ತಿಂಗಳಿನಿಂದ ಪತ್ರ ವ್ಯವಹಾರ ನಡೆಸಲಾಗಿದೆ. ಅಗತ್ಯವಿದ್ದಲ್ಲಿ, ಕೇಂದ್ರ ಸರಕಾರದ ಬಳಿ ನಿಯೋಗ ಕೊಂಡೊಯ್ಯಲು ರಾಜ್ಯ ಸರಕಾರ ಸಿದ್ಧವಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.

ಮಂಗಳವಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ವೇಳೆ ತೊಗರಿ ಖರೀದಿ ಕೇಂದ್ರವನ್ನು ಸ್ಥಗಿತಗೊಳಿಸಿದ ಪರಿಣಾಮ ಗುಲ್ಬರ್ಗದಲ್ಲಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸರಕಾರವು ಸಾಲ ಮನ್ನಾ ಮಾಡಿದರೂ, ರೈತರಲ್ಲಿ ಆತ್ಮವಿಶ್ವಾಸ ತುಂಬಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಜಯಚಂದ್ರ, 3.16 ಲಕ್ಷ ತೊಗರಿ ಬೆಳೆಗಾರರು ನೋಂದಣಿ ಮಾಡಿಸಿಕೊಂಡಿದ್ದಾರೆ. ಕೇಂದ್ರ ಸರಕಾರ 26.50 ಲಕ್ಷ ಕ್ವಿಂಟಾಲ್ ತೊಗರಿ ಖರೀದಿಗೆ ಮಾತ್ರ ಅನುಮತಿ ನೀಡಿತ್ತು. ಈಗಾಗಲೇ ಅಷ್ಟೂ ಪ್ರಮಾಣದ ತೊಗರಿ ಖರೀದಿಸಲಾಗಿದೆ ಎಂದರು.

ಇನ್ನೂ ಸುಮಾರು 40 ಲಕ್ಷ ಕ್ವಿಂಟಾಲ್ ತೊಗರಿ ಖರೀದಿಸಬೇಕಿದೆ. ತೊಗರಿ ಖರೀದಿ ಕೇಂದ್ರಗಳಲ್ಲಿ ಖರೀದಿ ನಿಲ್ಲಿಸಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿರುವುದು ನಿಜ. ಆದುದರಿಂದ, ಹೆಚ್ಚಿನ ಪ್ರಮಾಣದಲ್ಲಿ ತೊಗರಿ ಖರೀದಿಗೆ ಕೇಂದ್ರ ಸರಕಾರ ಅವಕಾಶ ಮಾಡಿಕೊಡಬೇಕು ಎಂದು ಅವರು ಹೇಳಿದರು. ಪ್ರತಿ ಕ್ವಿಂಟಾಲ್‌ಗೆ ಕೇಂದ್ರ ಸರಕಾರ 5450 ರೂ. ನಿಗದಿ ಮಾಡಿದೆ. ಆದರೆ, ರಾಜ್ಯ ಸರಕಾರವು ಪ್ರೋತ್ಸಾಹ ಧನ ನೀಡಿ ಪ್ರತಿ ಕ್ವಿಂಟಾಲ್ ಅನ್ನು 6 ಸಾವಿರ ರೂ.ಗಳಂತೆ ತೊಗರಿ ಖರೀದಿಸಿದೆ. ಇದಕ್ಕಾಗಿ 150 ಕೋಟಿ ರೂ.ಗಳನ್ನು ಭರಿಸಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ತೊಗರಿ ಖರೀದಿಸಲು ಪ್ರಧಾನಿ ಮನವೊಲಿಕೆಗೆ ಬಿಜೆಪಿಯವರು ಸಹಕರಿಸಬೇಕು ಎಂದು ಜಯಚಂದ್ರ ತಿಳಿಸಿದರು.

ಕೇಂದ್ರ ಸರಕಾರದ ಮೇಲೆ ಒತ್ತಡ ತರುವುದು ಒಂದು ಕಡೆಯಾದರೆ ರಾಜ್ಯ ಸರಕಾರವೂ ರೈತರ ನೆರವಿಗೆ ಬಂದು ತೊಗರಿ ಖರೀದಿಯನ್ನು ಮತ್ತೆ ಆರಂಭಿಸಬೇಕು. ಕೇಂದ್ರ ಸರಕಾರದ ಬಳಿ ನಿಯೋಗ ಹೋಗಿಒತ್ತಡ ಹೇರಲು ನಮ್ಮ ಅಭ್ಯಂತರವಿಲ್ಲ. ತೊಗರಿ ಫಸಲು ಬರುವ ಮುನ್ನವೆ ರಾಜ್ಯ ಸರಕಾರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿತ್ತು. ನಾಳೆಯಿಂದಲೆ ತೊಗರಿ ಖರೀದಿಯನ್ನು ಆರಂಭಿಸಿ ಎಂದು ಜಗದೀಶ್ ಶೆಟ್ಟರ್ ಆಗ್ರಹಿಸಿದರು.

ಕೃಷಿ ಹಾಗೂ ಸಂಬಂಧಪಟ್ಟ ಇಲಾಖೆ ಪೂರ್ವ ತಯಾರಿಯನ್ನು ಸುಗ್ಗಿ ಕಾಲಕ್ಕೂ ಮುಂಚಿತವಾಗಿಯೆ ಮಾಡಿಕೊಳ್ಳಬೇಕಿತ್ತು. ಅದನ್ನು ಬಿಟ್ಟು ಈಗ ಕೇಂದ್ರದ ಬಳಿ ನಿಯೋಗ ಹೋಗೋಣ ಎಂದರೆ ಹೇಗೆ, ಈವರೆಗೆ ಸರಕಾರ ನಿದ್ದೆ ಮಾಡುತ್ತಿತ್ತೆ ಎಂದು ಬಿಜೆಪಿ ಸದಸ್ಯ ಗೋವಿಂದ ಕಾರಜೋಳ ಟೀಕಿಸಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಶಿವಾನಂದ ಪಾಟೀಲ್, ಕೇಂದ್ರ ಮತ್ತು ರಾಜ್ಯ ಸರಕಾರಗಳು ಸೇರಿ ತೊಗರಿ ಖರೀದಿ ಮಾಡಬೇಕು. ಕಳೆದ ಬಾರಿ ಖರೀದಿಸಿರುವ ತೊಗರಿ ಇನ್ನು ಗೋಡೌನ್‌ಗಳಲ್ಲಿ ದಾಸ್ತಾನಿದೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಎರಡು ಸರಕಾರಗಳು ಮುಂದೆ ಬರಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News