ಚೆಮ್ಮನೂರ್ ಜುವೆಲರ್ಸ್ ದರೋಡೆ ಯತ್ನ: ಆರೋಪಿಗಳ ಪತ್ತೆಗೆ ವಿಶೇಷ ತಂಡ

Update: 2018-02-20 16:56 GMT

ಬೆಂಗಳೂರು, ಫೆ.20: ಚೆಮ್ಮನೂರ್ ಚಿನ್ನಾಭರಣ ಮಳಿಗೆ ರಾಜಾಜಿನಗರ ಶಾಖೆಯಲ್ಲಿ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಪೆಟ್ರೋಲ್ ಬಾಂಬ್ ಎಸೆದು ದರೋಡೆಗೆ ಯತ್ನಿಸಿ ಪರಾರಿಯಾಗಿರುವ ಪ್ರಕರಣ ಸಂಬಂಧ ಆರೋಪಿಗಳ ಬಂಧನಕ್ಕೆ ತೀವ್ರ ತನಿಖೆ ಕೈಗೊಂಡಿರುವ ಪೊಲೀಸರು, ಆರು ವಿಶೇಷ ತಂಡ ರಚಿಸಲಾಗಿದೆ.

ನಗರದ ಉತ್ತರ ವಿಭಾಗದ ಡಿಸಿಪಿ ಚೇತನ್‌ಸಿಂಗ್ ರಾಥೋಡ್ ಅವರು ಆರು ವಿಶೇಷ ತಂಡ ರಚಿಸಿದ್ದು, ಈ ತಂಡಗಳು ದರೋಡೆಕೋರರ ಬಗ್ಗೆ ಮಾಹಿತಿ ಕಲೆ ಹಾಕುತ್ತಿವೆ.

ಘಟನೆ ನಡೆದ ಚೆಮ್ಮನೂರು ಚಿನ್ನಾಭರಣ ಮಳಿಗೆಯಲ್ಲಿ ಅಳವಡಿಸಲಾಗಿರುವ ಸಿಸಿ ಟಿವಿ ಹಾಗೂ ದರೋಡೆಕೋರರು ಪರಾರಿಯಾಗಿರುವ ರಸ್ತೆಗಳಲ್ಲಿನ ಸಿಸಿ ಟಿವಿಗಳ ದೃಶ್ಯಾವಳಿಗಳನ್ನು ವಶಕ್ಕೆ ತೆಗೆದುಕೊಂಡಿರುವ ತನಿಖಾ ತಂಡವೊಂದು ಆರೋಪಿಗಳ ಗುರುತು ಪತ್ತೆ ಹಚ್ಚಲು ಮುಂದಾಗಿದೆ ಎಂದು ತಿಳಿದುಬಂದಿದೆ.

ದುಷ್ಕರ್ಮಿಗಳು, ಗುರುತು ಸಿಗಬಾರದೆಂದು ಹೆಲ್ಮೆಟ್ ಧರಿಸಿದ್ದರು. ಹೀಗಾಗಿ, ಸಿಸಿಟಿವಿಯಲ್ಲಿನ ದೃಶ್ಯಾವಳಿ ಅಸ್ಪಷ್ಟವಾಗಿವೆ. ದರೋಡೆಕೋರರ ಹಲ್ಲೆಯಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭದ್ರತಾ ಸಿಬ್ಬಂದಿ ನಂಜಪ್ಪ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News