ಶಾಸಕರ ನಿರಾಸಕ್ತಿ: ವಿಧಾನಸಭೆ ಅಧಿವೇಶನ ಮೊಟಕು

Update: 2018-02-20 16:59 GMT

ಬೆಂಗಳೂರು, ಫೆ.20: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಸಿದ್ಧತೆ ಹಾಗೂ ಕಲಾಪದಲ್ಲಿ ಪಾಲ್ಗೊಳ್ಳಲು ಶಾಸಕರು ತೋರುತ್ತಿರುವ ನಿರಾಸಕ್ತಿಯಿಂದಾಗಿ ವಿಧಾನಸಭೆ ಅಧಿವೇಶನವನ್ನು ಮೊಟಕುಗೊಳಿಸಲು ನಿರ್ಧರಿಸಲಾಗಿದೆ.

ಮಂಗಳವಾರ ವಿಧಾನಸೌಧದಲ್ಲಿ ನಡೆದ ವಿಧಾನಸಭೆ ಕಾರ್ಯಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಫೆ.5ರಂದು ರಾಜ್ಯಪಾಲರು ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡುವ ಮೂಲಕ ಆರಂಭವಾದ ಅಧಿವೇಶನವು, ಫೆ.28ರವರೆಗೆ ನಡೆಸಲು ಉದ್ದೇಶಿಸಲಾಗಿತ್ತು.

ಮಾರ್ಚ್ ಮೊದಲ ಅಥವಾ ಎರಡನೆ ವಾರದಲ್ಲಿ ಚುನಾವಣಾ ನೀತಿ ಸಂಹಿತೆ ಘೋಷಣೆಯಾಗುವ ಸಾಧ್ಯತೆಗಳಿರುವುದರಿಂದ, ರಾಜಕೀಯ ಪಕ್ಷಗಳು ಚುನಾವಣೆಗಾಗಿ ಅಗತ್ಯಸಿದ್ಧತೆಗಳನ್ನು ಮಾಡಿಕೊಳ್ಳುವುದು ಒಂದೆಡೆಯಾದರೆ, ಶಾಸಕರು ಈಗಿನಿಂದಲೆ ಕಾರ್ಯಕಲಾಪಗಳಲ್ಲಿ ಪಾಲ್ಗೊಳ್ಳದೆ ನಿರಾಸಕ್ತಿ ತೋರುತ್ತಿರುವುದು ಮತ್ತೊಂದು ಕಾರಣವಾಗಿದೆ.

ನಿರ್ಣಯ ಪ್ರಕಟ: ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದಮೇಲೆ ನಡೆದ ಚರ್ಚೆಗೆ ಫೆ.21ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸಲಿದ್ದಾರೆ. ಫೆ.23ರವರೆಗೆ ವಿಧೇಯಕಗಳ ಮಂಡನೆ ಹಾಗೂ ಪರ್ಯಾಲೋಚನೆ ನಡೆಯಲಿದೆ. ಫೆ.22ರವರೆಗೆ ಆಯವ್ಯಯದ ಮೇಲೆ ಸಾಮಾನ್ಯ ಚರ್ಚೆಗೆ ಅವಕಾಶ ನೀಡಲಾಗುವುದು.

ಫೆ.23ರಂದು ಆಯವ್ಯಯದ ಮೇಲೆ ನಡೆದ ಸಾಮಾನ್ಯ ಚರ್ಚೆಗೆ ಮುಖ್ಯಮಂತ್ರಿ ಉತ್ತರ ನೀಡಲಿದ್ದು, ತದನಂತರ ಅದೇ ದಿನದಂದು ಧನವಿನಿಯೋಗ ವಿಧೇಯಕ ಹಾಗೂ ಸಂಬಂಧಿತ ವಿಧೇಯಕಗಳ ಮಂಡನೆ ಹಾಗೂ ಅಂಗೀಕಾರ ನಡೆಯಲಿದೆ. ಅಲ್ಲದೆ, ಫೆ.23ರಂದೆ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ತೀರ್ಮಾನಿಸಲಾಗಿದೆ ಎಂದು ಸ್ಪೀಕರ್ ಪೀಠದಲ್ಲಿ ಆಸೀನರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News