ಕನ್ನಡ ವಿರೋಧಿ ಹೇಳಿಕೆ ಆರೋಪ: ಅನಂತಕುಮಾರ್ ಹೆಗಡೆ ಗಡಿಪಾರಿಗೆ ಒತ್ತಾಯ

Update: 2018-02-20 17:04 GMT

ಬೆಂಗಳೂರು, ಫೆ.20: ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಕನ್ನಡ ಭಾಷಾ ವಿರೋಧಿ ಹೇಳಿಕೆ ನೀಡಿರುವುದಾಗಿ ಆರೋಪಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಅವರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿದರು.

ಮಂಗಳವಾರ ನಗರದ ಮೌರ್ಯ ವೃತ್ತದ ಬಳಿ ಬೆಂ.ನಗರ ಜಿಲ್ಲಾ ಕಾಂಗ್ರೆಸ್ ಮಾಹಿತಿ ತಂತ್ರಜ್ಞಾನ ವಿಭಾಗದ ಸದಸ್ಯರು, ಭಾಷಾ ಶುದ್ಧತೆ ಇಲ್ಲದವರಿಗೆ ಕನ್ನಡ ಮಾತನಾಡಲು ಯೋಗ್ಯತೆ ಇಲ್ಲ ಎಂದು ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ನೀಡಿರುವುದಾಗಿ ಆರೋಪಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಎಸ್. ಮನೋಹರ್, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ಶಾಂತಿ ನೆಲೆಸಿರುವ ಕರ್ನಾಟಕದಲ್ಲಿ ಬೆಂಕಿ ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ. ಕೋಮುವಾದಿ,ಜಾತಿವಾದಿ ಹಾಗೂ ಕನ್ನಡ ಭಾಷಾ ವಿರೋಧಿ ಹೇಳಿಕೆಗಳನ್ನು ನೀಡಿ ಕರ್ನಾಟಕದ ಜನರನ್ನು ದಿಕ್ಕು ತಪ್ಪಿಸಲು ನಾಲಿಗೆ ಹರಿಬಿಡುವ ಹೆಗಡೆ ಅವರನ್ನು ಗಡಿಪಾರು ಮಾಡಬೇಕೆಂದರು.

ಸಾರ್ವಜನಿಕರು ತಾವು ದುಡಿದ ಹಣ ಬ್ಯಾಂಕಿನಲ್ಲಿ ಭದ್ರವಾಗಿರುತ್ತದೆ ಎಂದು ಠೇವಣಿ ಇಡುತ್ತಾರೆ. ಆದರೆ, ವಜ್ರ ವ್ಯಾಪಾರಿ ನೀರವ್ ಮೋದಿ ಅಂತವರಿಗೆ ಯಾವುದೇ ದಾಖಲಾತಿ ಪಡೆಯದೇ ಸಾಲ ನೀಡಿದ್ದಾರೆ. ಇಂದು ಸಾಲ ತೀರಿಸಲಾರದೆ ದೇಶ ಬಿಟ್ಟು ಪಲಾಯನ ಮಾಡಲು ನರೇಂದ್ರ ಮೋದಿ ಸರಕಾರ ಸಹಾಯ ಮಾಡಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಜನಾರ್ಧನ್, ಸಲೀಂ, ನಿರಂಜನ್ ರಾವ್, ಶೇಖರ್, ಹೇಮರಾಜು ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News