ಬಿಬಿಎಂಪಿ ಶಾಲೆಯ ಅವ್ಯವಸ್ಥೆ: ಉಪ ಮೇಯರ್ ಕೆಂಡಾಮಂಡಲ

Update: 2018-02-20 17:05 GMT

ಬೆಂಗಳೂರು, ಫೆ. 20: ನಗರದ ಟಸ್ಕರ್‌ಟೌನ್‌ನಲ್ಲಿರುವ ಬಿಬಿಎಂಪಿ ಶಾಲೆ ಹಾಗೂ ಪಿಯುಸಿ ಕಾಲೇಜಿನ ಅವ್ಯವಸ್ಥೆಯನ್ನು ಕಂಡು ಕೆಂಡಾಮಂಡಲವಾದ ಉಪ ಮೇಯರ್ ಪದ್ಮಾವತಿ ನರಸಿಂಹಮೂರ್ತಿ ಮುಖ್ಯೋಪಾಧ್ಯಾಯರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಗಂಗಮ್ಮ ಹಾಗೂ ಮತ್ತಿತರೆ ಅಧಿಕಾರಿಗಳ ತಂಡ ಇಲ್ಲಿನ ಶಾಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗಬ್ಬು ನಾರುತ್ತಿರುವ ಟಾಯ್ಲೆಟ್, ವಿತರಣೆಯಾಗದೆ ಕೊಳೆಯುತ್ತಿರುವ ಸ್ಯಾನಿಟರಿ, ಪ್ರಾಣಿ ಸತ್ತ ಗಬ್ಬು ವಾಸನೆ, ಛಾವಣಿಯೇ ಇಲ್ಲದ ಲ್ಯಾಬ್‌ಗಳ ದೃಶ್ಯಗಳನ್ನು ಕಂಡು ಪದ್ಮಾವತಿ ಶಾಲೆಯ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಡವರ ಮಕ್ಕಳಾದರೆ ಇಷ್ಟೊಂದು ತಾತ್ಸಾರವೆ. ಇದೇ ಪರಿಸ್ಥಿತಿ ನಿಮ್ಮ ಮಕ್ಕಳಿಗೆ ಬಂದಿದ್ದರೆ ಸುಮ್ಮನಿರುತ್ತಿದ್ದಿರಾ ಎಂದು ಪ್ರಶ್ನಿಸಿದ ಅವರು, ಪಾಲಿಕೆ ಶಾಲೆಗೆ ಬನ್ನಿ ಬನ್ನಿ ಎಂದು ಭಾಷಣ ಮಾಡುತ್ತೀರಲ್ಲ, ಹೀಗೇನಾ ನೀವು ಶಾಲೆಯನ್ನು ಇಟ್ಟುಕೊಂಡಿರುವುದು, ಈ ರೀತಿ ಅವ್ಯವಸ್ಥೆ ಇದ್ದರೆ ಯಾವ ಮಕ್ಕಳು ತಾನೇ ಶಾಲೆ ಬರುತ್ತಾರೆ ಎಂದು ತರಾಟೆಗೆ ತೆಗೆದುಕೊಂಡರು.

ಪಿಯುಸಿ ಕಾಲೇಜಿಗೆ ಭೇಟಿ ನೀಡಿದ ಅವರು, ಅಲ್ಲಿನ ಲ್ಯಾಬ್‌ನಲ್ಲಿ ಕೊಠಡಿಯ ಮೇಲ್ಛಾವಣಿ ಇಲ್ಲದಿರುವುದು, ಸರಕಾರ ಹೆಣ್ಣು ಮಕ್ಕಳಿಗಾಗಿ ನೀಡುವ ಸ್ಯಾನಿಟರಿಗಳು ವಿತರಣೆಯಾಗದೇ ಹಾಳಾಗಿದಿದ್ದನ್ನು ಕಂಡು ತೀವ್ರ ಅಸಮಾಧಾನಗೊಂಡರು. ಮುಖ್ಯೋಪಾಧ್ಯಾಯರ ಬೇಜವಾಬ್ದಾರಿತನವನ್ನು ಆಯುಕ್ತರು ಹಾಗೂ ಮೇಯರ್ ಗಮನಕ್ಕೆ ತಂದು ಅಮಾನತು ಮಾಡುವಂತೆ ತಿಳಿಸಲಾಗುವುದು ಎಂದರು.

ಕೂಡಲೇ ಶಾಲೆಯ ನೈಜ ಚಿತ್ರಣ ಬದಲಾಗಬೇಕು. ನವೀಕರಣಕ್ಕೆ ಎಷ್ಟು ಹಣ ಖರ್ಚಾಗುತ್ತದೆ ಎಂಬುದರ ಬಗ್ಗೆ ನೀಲಿ ನಕ್ಷೆ ನೀಡಿದರೆ ಉಪಮೇಯರ್ ಅನುದಾನದಲ್ಲಿ ಹಣ ಮಂಜೂರು ಮಾಡಿಸಿಕೊಡಲಾಗುವುದು. ವಿದ್ಯಾರ್ಥಿಗಳ ಕಲಿಕೆಗೆ ಉತ್ತಮ ವಾತಾವರಣ ನಿರ್ಮಾಣವಾಗಬೇಕು. ಒಂದು ವೇಳೆ ನಿರ್ಲಕ್ಷ ತೋರಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News