ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲೂ ಟ್ರಕ್ ಟರ್ಮಿನಲ್ ನಿರ್ಮಾಣ: ಸಾರ್ವಜನಿಕ ಉದ್ಯಮಗಳ ಸಮಿತಿ ಶಿಫಾರಸ್ಸು

Update: 2018-02-20 17:07 GMT

ಬೆಂಗಳೂರು, ಫೆ.20: ಬೆಂಗಳೂರು ನಗರಕ್ಕೆ ವಿವಿಧ ದಿಕ್ಕುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಲಾರಿ, ಟ್ರಕ್‌ಗಳು ಆಗಮಿಸುವ ಹಿನ್ನೆಲೆಯಲ್ಲಿ ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿ ಟ್ರಕ್ ಟರ್ಮಿನಲ್‌ಗಳನ್ನು ನಿರ್ಮಿಸುವಂತೆ ರಾಜ್ಯ ವಿಧಾನಮಂಡಲದ ಸಾರ್ವಜನಿಕ ಉದ್ಯಮಗಳ ಸಮಿತಿಯು ತನ್ನ 133ನೆ ವರದಿಯಲ್ಲಿ ಶಿಫಾರಸ್ಸು ಮಾಡಿದೆ.

ಮಂಗಳವಾರ ವಿಧಾನಸಭೆಯಲ್ಲಿ ಡಾ.ಎ.ಬಿ.ಮಾಲಕರೆಡ್ಡಿ ಅಧ್ಯಕ್ಷತೆಯ ವಿಧಾನ ಮಂಡಲದ ಸಾರ್ವಜನಿಕ ಉದ್ಯಮಗಳ ಸಮಿತಿಯ ವರದಿಯನ್ನು ಸಮಿತಿಯ ಸದಸ್ಯ ಡಿ.ಎನ್.ಜೀವರಾಜ್ ಮಂಡನೆ ಮಾಡಿದರು. ಇದರಲ್ಲಿ ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ಸ್ ನಿಗಮದ ಕಾರ್ಯಾಚರಣೆಯಲ್ಲಿ ಗಮನಿಸಲಾದ ನ್ಯೂನತೆಗಳ ಬಗ್ಗೆ ಪ್ರಸ್ತಾಪಿಸಲಾಗಿದೆ.

ಟರ್ಮಿನಲ್‌ಗಳ ನಿರ್ಮಾಣಕ್ಕೆ ಅಗತ್ಯವಿರುವ ನಿವೇಶನಗಳನ್ನು ರಾಜ್ಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಸೂಕ್ತ ಪ್ರಸ್ತಾವನೆ ಸಲ್ಲಿಸಿ ಪಡೆದುಕೊಳ್ಳುವಂತೆ ಶಿಫಾರಸ್ಸು ಮಾಡಲಾಗಿದೆ. ಟ್ರಕ್ ಟರ್ಮಿನಲ್‌ಗಳನ್ನು ನಿರ್ಮಿಸುವ ಯೋಜನೆಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ, ಆರ್ಥಿಕ ಇಲಾಖೆಯು ಅದರ ವೌಲ್ಯಮಾಪನಗಳ ನಂತರ ಆದ್ಯತೆ ಮೇರೆಗೆ ಅನುದಾನ ನೀಡಲು ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡಲಾಗಿದೆ.

ಆರ್ಥಿಕ ಇಲಾಖೆ ನೀಡುವ ಅನುದಾನದ ಸದ್ಬಳಕೆಯೊಂದಿಗೆ, ವಿಳಂಬವಾಗದಂತೆ ಆದ್ಯತೆಗನುಸಾರವಾಗಿ ಗುಣಮಟ್ಟದ ಟ್ರಕ್ ಟರ್ಮಿನಲ್‌ಗಳನ್ನು ರಾಜ್ಯದ ಹಾಗೂ ಬೆಂಗಳೂರಿನ ವಿವಿದೆಡೆಯಲ್ಲಿ ನಿರ್ಮಿಸುವಂತೆ ಶಿಫಾರಸ್ಸು ಮಾಡಲಾಗಿದೆ.

ಯಶವಂತಪುರ ಟ್ರಕ್ ಟರ್ಮಿನಲ್‌ನಲ್ಲಿನ ಭದ್ರತಾ ಕೊರತೆಯನ್ನು ಸಾರಿಗೆ ಮತ್ತು ಒಳ ಆಡಳಿತ ಇಲಾಖೆ ಜಂಟಿಯಾಗಿ ನೀಗಿಸಬೇಕು, ದಾಸನಪುರದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣವಾಗಿದ್ದರೂ ಅಗತ್ಯ ಮೂಲಸೌಕರ್ಯಹಾಗೂ ಸಮರ್ಪಕ ರಸ್ತೆ ಸಂಪರ್ಕವಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನಿಗಮವು ತನ್ನ ವಾರ್ಷಿಕ ವರದಿಯಲ್ಲಿ ಷೇರುದಾರರಿಂದ ಪಡೆದಿರುವ 33,49,100 ರೂ.ಠೇವಣಿಯನ್ನು ‘ಶೇರ್ ಅಪ್ಲಿಕೇಷನ್ ಪೆಂಡಿಂಗ್ ಅಲಾಟ್ಮೆಂಟ್’(Share Application Pending Allotment) ಎಂದು ಬಿಂಬಿಸಿದೆ. ಈ ಮೊತ್ತಕ್ಕೆ ನಿಗಮವು ಬಂಡವಾಳ ಹೂಡಿಕೆದಾರರಿಗೆ ಷೇರನ್ನು ಹಂಚಬೇಕು ಎಂದು ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.

ದೇವರಾಜ ಅರಸು ಟ್ರಕ್ ರ್ಟುನಲ್ಸ್‌ನ ಕಳೆದ ಐದು ವರ್ಷಗಳ ವ್ಯವಹಾರ ಹಾಗೂ ಕಾರ್ಯನಿರ್ವಹಣೆಯನ್ನು ಲೆಕ್ಕಪರಿಶೋಧನೆಗೆ ಒಳಪಡಿಸಬೇಕು, ಜೊತೆಗೆ ದೇವರಾಜ ಅರಸು ಟ್ರಕ್ ಟರ್ಮಿನಲ್‌ನಆಡಳಿತಾತ್ಮಕ ಸಮಸ್ಯೆ ಪರಿಹರಿಸಲು ಸೂಕ್ತ ಕ್ರಮ ವಹಿಸಬೇಕು.

ಅಲ್ಲದೆ, ರಸ್ತೆಯ ಬದಿಯಲ್ಲಿ ಟ್ರಕ್ ವಾಹನಗಳ ನಿಲುಗಡೆಯನ್ನು ತಪ್ಪಿಸಲು ಕಾನೂನಾತ್ಮಕ ಹಾಗೂ ಶೈಕ್ಷಣಿಕ ಕ್ರಮಗಳನ್ನು ಕೈಗೊಳ್ಳುವಂತೆ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News