ಶಿವಮೊಗ್ಗ: ಹುಟ್ಟು ಹಬ್ಬದ ದಿನದಂದೇ ಅಪಘಾತದಲ್ಲಿ ಮೃತಪಟ್ಟ ಬಾಲಕಿ

Update: 2018-02-20 17:15 GMT

ಶಿವಮೊಗ್ಗ, ಫೆ. 20: ವೇಗವಾಗಿ ಆಗಮಿಸಿದ ಖಾಸಗಿ ಪ್ರಯಾಣಿಕ ಬಸ್‍ವೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಎರಡು ವರ್ಷದ ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟು, ಮತ್ತೋರ್ವ ಬಾಲಕಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜಿಲ್ಲೆಯ ಹೊಳೆಹೊನ್ನೂರು ಸಮೀಪದ ಅಗರದಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. 

ಅಗರದಹಳ್ಳಿ ಗ್ರಾಮದ ಕೃತ್ತಿಕಾ (2) ಮೃತಪಟ್ಟ ಬಾಲಕಿ ಎಂದು ಗುರುತಿಸಲಾಗಿದೆ. ತೇಜಸ್ವನಿ (17) ಎಂಬ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದು, ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಘಟನೆಯ ನಂತರ ರೊಚ್ಚಿಗೆದ್ದ ಗ್ರಾಮಸ್ಥರು ಅಪಘಾತ ನಡೆಸಿದ ಬಸ್ ಮೇಲೆ ಕಲ್ಲು ತೂರಾಟ ನಡೆಸಿ ಗಾಜುಗಳನ್ನು ಪುಡಿಗೈದಿದ್ದಾರೆ. 

ಘಟನೆಯಿಂದ ಶಿವಮೊಗ್ಗ - ಚಿತ್ರದುರ್ಗ ನಡುವಿನ ರಾಷ್ಟ್ರೀಯಹೆದ್ಧಾರಿಯಲ್ಲಿ ಕೆಲ ಸಮಯ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಉದ್ವಿಗ್ನ ಸ್ಥಿತಿ ನೆಲೆಸಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಬಸ್ ಚಾಲಕನ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಜನುಮದಿನ: ಸೋಮವಾರ ಮೃತ ಬಾಲಕಿ ಕೃತ್ತಿಕಾ ಹುಟ್ಟಿದ ದಿನವಾಗಿತ್ತು. ಈ ಕಾರಣದಿಂದಲೇ ನೆರೆಹೊರೆಯವರೆಗೆ ಬಾಲಕಿಯ ಚಾಕ್‍ಲೇಟ್ ನೀಡಲು ತೆರಳಿದ್ದಳು. ಚಾಕ್‍ಲೇಟ್ ನೀಡಲು ಆಗಮಿಸಿದ್ದ ಬಾಲಕಿಯನ್ನು ಆಕೆಯ ಮನೆಗೆ ಬಿಡಲು ತೇಜಸ್ವಿನಿಯು ತೆರಳುತ್ತಿದ್ದಾಗ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. 

ವಾಹನಗಳ ವೇಗಕ್ಕೆ ಕಡಿವಾಣ ಹಾಕಿ
'ಶಿವಮೊಗ್ಗ - ಚಿತ್ರದುರ್ಗ ನಡುವಿನ ರಾಷ್ಟ್ರೀಯ ಹೆದ್ದಾರಿಯ ಹೊಳೆಹೊನ್ನೂರು ಭಾಗದ ಜನವಸತಿ ಪ್ರದೇಶಗಳಲ್ಲಿ ಮಿತಿಮೀರಿದ ವೇಗದಲ್ಲಿ ವಾಹನಗಳು ಸಂಚರಿಸುತ್ತಿವೆ. ಇದರಿಂದ ಈ ಭಾಗದಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದು, ಅಮಾಯಕರು ಸಾವು - ನೋವಿಗೆ ತುತ್ತಾಗುವಂತಾಗಿದೆ' ಎಂದು ಕಾಂಗ್ರೆಸ್ ಪಕ್ಷದ ಹೊಳೆಹೊನ್ನೂರು ಬ್ಲಾಕ್ ಅಧ್ಯಕ್ಷ ಹನುಮಂತು ತಿಳಿಸಿದ್ದಾರೆ. 

ರಾಷ್ಟ್ರೀಯ ಹೆದ್ಧಾರಿ ಹಾದು ಹೋಗಿರುವ ಜನವಸತಿ ಪ್ರದೇಶ, ಶಾಲೆ, ಆಸ್ಪತ್ರೆ ಮತ್ತಿತರ ಸಾರ್ವಜನಿಕ ಓಡಾಟವಿರುವ ಸ್ಥಳಗಳಲ್ಲಿ ಮಿತಿಮೀರಿದ ವೇಗದಲ್ಲಿ ಸಂಚರಿಸುವ ವಾಹನ ಚಾಲಕರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಬೇಕು. ವೇಗ ನಿಯಂತ್ರಣ ಸೂಚನಾ ಫಲಕಗಳ ಅಳವಡಿಕೆ ಮಾಡಬೇಕು. ಅಗತ್ಯವಿರುವೆಡೆ ವೈಜ್ಞಾನಿಕವಾಗಿ ಹಂಪ್ಸ್ ಗಳನ್ನು ಹಾಕಬೇಕು ಎಂದು ಆಗ್ರಹಿಸಿದ್ದಾರೆ. 

ಮಿತಿಮೀರಿದ ವೇಗ, ನಿರ್ಲಕ್ಷ್ಯದ ಚಾಲನೆಯಿಂದ ಉಂಟಾಗುವ ಅಪಘಾತಗಳಿಗೆ ಕಡಿವಾಣ ಹಾಕಬೇಕು. ಈ ಮೂಲಕ ಅಮಾಯಕ ನಾಗರಿಕರು ಸಾವು - ನೋವಿಗೆ ತುತ್ತಾಗದಂತೆ ರಾಷ್ಟ್ರೀಯ ಹೆದ್ದಾರಿ ಹಾಗೂ ಪೊಲೀಸ್ ಇಲಾಖೆಯು ಕಾಲಮಿತಿಯಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಹನುಮಂತುರವರು ಆಗ್ರಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News