ಬೆಂಗಳೂರು: ಚಲನಚಿತ್ರ ನೃತ್ಯ ನಿರ್ದೇಶಕರಿಗೆ ಅವಕಾಶ ನೀಡಲು ಆಗ್ರಹ

Update: 2018-02-20 18:07 GMT

ಬೆಂಗಳೂರು, ಫೆ. 20: ಕನ್ನಡದ ಕಿರುತೆರೆಯಲ್ಲಿ ನಡೆಯುತ್ತಿರುವ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಕನ್ನಡ ಚಲನಚಿತ್ರ ನೃತ್ಯ ನಿರ್ದೇಶಕರಿಗೆ ಹಾಗೂ ನೃತ್ಯಗಾರರಿಗೆ ಹೆಚ್ಚಿನ ಅವಕಾಶಗಳನ್ನು ನೀಡಬೇಕು ಎಂದು ನೃತ್ಯ ಕಲಾವಿದರು ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಲಾವಿದ ಎಂ.ಮಹೇಶ್, ಸಿನಿಮಾ ರಂಗದಲ್ಲಿ ಬಹಳಷ್ಟು ನೃತ್ಯ ನಿರ್ದೇಶಕರು ಅವಕಾಶ ವಂಚಿತರಾಗಿ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ನೂರಾರು ಜನರು ಜೀವನೋಪಾಯಕ್ಕಾಗಿ ದಾರಿ ಕಾಣದೆ ಪರದಾಡುತ್ತಿದ್ದಾರೆ. ಮತ್ತೊಂದು ಕಡೆ ಕಿರುತೆರೆಯಲ್ಲಿ ನಡೆಯುತ್ತಿರುವ ರಿಯಾಲಿಟಿ ಡ್ಯಾನ್ಸ್ ಶೋಗಳಲ್ಲಿ ನೃತ್ಯ ನಿರ್ದೇಶಕರನ್ನು ನಿರ್ಲಕ್ಷ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಡ್ಯಾನ್ಸ್ ಶೋಗಳನ್ನು ಮಾಡುವ ಬಹುತೇಕ ಮಾಧ್ಯಮಗಳು ತಮ್ಮ ಟಿಆರ್‌ಪಿ ಹೆಚ್ಚಿಸಿಕೊಳ್ಳುವ ಸಲುವಾಗಿ ಸೆಲೆಬ್ರಿಟಿಗಳನ್ನು ತೀರ್ಪುಗಾರರನ್ನಾಗಿ ಮಾಡಿಕೊಂಡಿರುತ್ತಾರೆ. ಆದರೆ, ಅವರು ತಮಗೆ ತೋಚಿದ ರೀತಿಯಲ್ಲಿ ಅಂಕಗಳನ್ನು ನೀಡುತ್ತಾರೆ. ಅವರಿಗೆ ಹೇಗೆ ಡ್ಯಾನ್ಸ್ ಮಾಡಿದರು ಎಂಬುದು ನಿಖರವಾಗಿ ಹೇಳಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಕಲೆಗೂ ಸ್ಪರ್ಧಿಗೂ ಅನ್ಯಾಯವಾಗುತ್ತದೆ. ಆದುದರಿಂದಾಗಿ, ನುರಿತ, ಅನುಭವಿ ನೃತ್ಯ ನಿರ್ದೇಶಕರನ್ನು ತೀರ್ಪುಗಾರರನ್ನಾಗಿ ಮಾಡಬೇಕು ಎಂದು ಅವರು ಮನವಿ ಮಾಡಿದರು.

ಇತ್ತೀಚಿನ ರಿಯಾಲಿಟಿ ಶೋಗಳಲ್ಲಿ ಕೇವಲ ಕೆಲವು ತಂಡಗಳಿಗೆ ಮಾತ್ರ ಅವಕಾಶ ನೀಡುತ್ತಿದ್ದು, ಎಲ್ಲ ರಿಯಾಲಿಟಿ ಶೋಗಳಲ್ಲೂ ಪುನರಾವರ್ತನೆಯಾಗುತ್ತಿದ್ದಾರೆ. ಇದರಿಂದಾಗಿ ಪ್ರತಿಭೆಯುಳ್ಳ ಹಲವು ನೃತ್ಯಗಾರರು ಮೂಲೆಗುಂಪಾಗುತ್ತಿದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಿ ನಡೆಯಲಿರುವ ಸ್ಪರ್ಧೆಗಳಲ್ಲಿ ಕನ್ನಡ ಹೊಸ ಪ್ರತಿಭೆಗಳಿಗೂ ಅವಕಾಶ ನೀಡಬೇಕು. ಆ ಮೂಲಕ ಸ್ಥಳೀಯ ಪ್ರತಿಭಾವಂತರಿಗೆ ಅವಕಾಶ ಕಲ್ಪಿಸಿಕೊಡಬೇಕು. ಹೊಸ ಪ್ರತಿಭೆಗಳನ್ನು ಬೆಳೆಸಿ, ಪ್ರೋತ್ಸಾಹಿಸಬೇಕು ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಕಲಾವಿದರಾದ ರಂಜು, ರೇಖಾ, ಪ್ರಶಾಂತ, ರಾಜು, ದೀಪ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News