ಭ್ರಷ್ಟಾಚಾರ ಪ್ರಕರಣ: ಇಸ್ರೇಲ್ ಪ್ರಧಾನಿ ನೆತನ್ಯಾಹು ಆಪ್ತರ ಬಂಧನ

Update: 2018-02-20 18:09 GMT

 ಜೆರುಸಲೇಂ, ಫೆ. 20: ವ್ಯಾಪಕ ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿ ಇಸ್ರೇಲ್ ಪೊಲೀಸರು ಪ್ರಧಾನಿ ಬೆಂಜಮಿನ್ ನೆತನ್ಯಾಹುರ ಇಬ್ಬರು ಆಪ್ತರನ್ನು ಬಂಧಿಸಿದ್ದಾರೆ.

ನೆತನ್ಯಾಹುರ ಮಾಜಿ ವಕ್ತಾರ ನಿರ್ ಹೆಫೆಟ್ಝ್ ಮತ್ತು ದೂರಸಂಪರ್ಕ ಸಚಿವಾಲಯದ ಮಾಜಿ ನಿರ್ದೇಶಕ ಶ್ಲೋಮೊ ಫಿಲ್ಬರ್ ಬಂಧನಕ್ಕೊಳಗಾದವರು.

ಭಾರೀ ಜನಪ್ರಿಯವಾಗಿರುವ ವಾರ್ತಾ ವೆಬ್‌ಸೈಟೊಂದರಲ್ಲಿ ನೆತನ್ಯಾಹುರಿಗೆ ಧನಾತ್ಮಕ ಪ್ರಚಾರ ನೀಡುವುದಕ್ಕೆ ಬದಲಿಯಾಗಿ, ಆ ವೆಬ್‌ಸೈಟ್‌ನ ಪ್ರಾಯೋಜಕ ಸಂಸ್ಥೆ ಬೆಝೆಕ್ ಟೆಲಿಕಾಮ್ ಕಂಪೆನಿಗೆ ಪೂರಕವಾದ ಕಾನೂನುಗಳನ್ನು ರೂಪಿಸಿದ ಪ್ರಕರಣದಲ್ಲಿ ಬಂಧಿತ ಇಬ್ಬರು ಆರೋಪಿಗಳಾಗಿದ್ದಾರೆ. ಈ ಮೂಲಕ ಟೆಲಿಕಾಂ ಕಂಪೆನಿಯು ಕೋಟಿಗಟ್ಟಳೆ ಡಾಲರ್ ಹಣ ಮಾಡಿದೆ ಎಂದು ಆರೋಪಿಸಲಾಗಿದೆ.

ಈ ಪ್ರಕರಣದಲ್ಲಿ ಆರೋಪಿ ಎಂಬುದಾಗಿ ಈವರೆಗೆ ನೆತನ್ಯಾಹುರನ್ನು ಹೆಸರಿಸಲಾಗಿಲ್ಲ.

ಬೆಝೆಕ್ ಅಧ್ಯಕ್ಷ ಶಾವುಲ್ ಎಲೋವಿಚ್, ಅವರ ಪತ್ನಿ, ಮಗ ಹಾಗೂ ಬೆಝೆಕ್‌ನ ಹಿರಿಯ ಅಧಿಕಾರಿಗಳು ಈಗಾಗಲೇ ಬಂಧನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News