2008ರಿಂದಲೇ ಲೆಟರ್ಸ್ ಆಫ್ ಅಂಡರ್ ಟೇಕಿಂಗ್ ನೀಡಲಾಗುತ್ತಿತ್ತು: ಗೋಕುಲ್ ನಾಥ್ ಶೆಟ್ಟಿ

Update: 2018-02-21 08:50 GMT

ಮುಂಬೈ, ಫೆ.21: ಪಂಜಾಬ್ ನ್ಯಾಷನಲ್ ಬ್ಯಾಂಕ್ 2008ರಿಂದ ಲೆಟರ್ಸ್ ಆಫ್ ಅಂಡರ್ ಟೇಕಿಂಗ್ ನೀಡುವ ಪ್ರಕ್ರಿಯೆ ಅನುಸರಿಸುತ್ತಿತ್ತು ಎಂದು 11,300 ಕೋಟಿ ರೂ. ಬ್ಯಾಂಕಿಂಗ್ ಹಗರಣ ಸಂಬಂಧ ಬಂಧನಕ್ಕೊಳಗಾಗಿರುವ ಪಿಎನ್‍ಬಿಯ ನಿವೃತ್ತ ಉಪ ಪ್ರಬಂಧಕ ಗೋಕುಲ್ ನಾಥ್ ಶೆಟ್ಟಿ ತಿಳಿಸಿದ್ದಾರೆಂದು    ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.

ಸೋಮವಾರ  ಈಗಾಗಲೇ ಬಂಧಿತರಾಗಿರುವ ಮೂವರು ಪಿಎನ್‍ಬಿ ಅಧಿಕಾರಿಗಳಾದ ಬೆಚು ತಿವಾರಿ, ಯಶವಂತ್ ಜೋಷಿ ಹಾಗೂ ಪ್ರಫುಲ್ ಸಾವಂತ್ ಅವರ ಪೋಲಿಸ್ ಕಸ್ಟಡಿ ಅವಧಿಯನ್ನು ಮಾರ್ಚ್ 3ರವರೆಗೆ ನ್ಯಾಯಾಲಯ ವಿಸ್ತರಿಸಿದೆ. ಇಲ್ಲಿಯ ತನಕ ಬಂಧಿತರಾಗಿರುವ ಎಲ್ಲಾ ಐದು ಮಂದಿ ಪಿಎನ್‍ಬಿ ಅಧಿಕಾರಿಗಳೂ ವಂಚನೆ ನಡೆದಾಗ ಬ್ಯಾಂಕಿನ ಬ್ರ್ಯಾಡಿ ಹೌಸ್ ಶಾಖೆಯ ಫಾರೆಕ್ಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಮುಖ್ಯ ಮ್ಯಾನೇಜರ್ ಆಗಿದ್ದ ತಿವಾರಿ ಆಗ ಶೆಟ್ಟಿ ನಡೆಸುತ್ತಿದ್ದ ವ್ಯವಹಾರಗಳ ಮೇಲೆ ನಿಗಾ ಇಡಬೇಕಿತ್ತಾದರೂ 2015-17 ಅವಧಿಯಲ್ಲಿ  ಶೆಟ್ಟಿ ನೀಡಿದ್ದ ಅಕ್ರಮ ಎಲ್‍ಒಯುಗಳ  ಬಗ್ಗೆ ತಿವಾರಿ ಗಮನ ಹರಿಸಿರಲಿಲ್ಲ ಎಂದು ವಿಶೇಷ ಸಿಬಿಐ ಅಭಿಯೋಜಕ ಎ ಲಿಮೊಸಿನ್ ಮಂಗಳವಾರದ ವಿಚಾರಣೆ ವೇಳೆಗೆ ತಿಳಿಸಿದ್ದಾರೆ. ಫೆಬ್ರವರಿ 19, 2016, ಫೆಬ್ರವರಿ 7 ಹಾಗೂ ಮಾರ್ಚ್ 14, 2017ರಂದು ತಿವಾರಿ  ಎಲ್‍ಒಯುಗಳ ಮೇಲೆ ನಿಗಾ ಇಡುವ ಸಲುವಾಗಿ ಮೂರು  ಸುತ್ತೋಲೆ ಹೊರಡಿಸಿದ್ದರೂ,  ಅದನ್ನು ಶೆಟ್ಟಿ, ಜೋಷಿ ಯಾ ಸಾವಂತ್ ಅನುಸರಿಸುತ್ತಿದ್ದರೆಯೇ ಅಥವಾ ಇಲ್ಲವೇ ಎಂದು ನೋಡುವ ಗೋಜಿಗೆ ಹೋಗಿರಲಿಲ್ಲವೆಂದು ಹೇಳಲಾಗಿದೆ.

ಮೂರು ಮಂದಿ ಬ್ಯಾಂಕ್ ಅಧಿಕಾರಿಗಳೂ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ದೂರಿದ ಸಿಬಿಐ ಇದಕ್ಕೆ ಶೆಟ್ಟಿಯನ್ನೇ ದೂರಿದೆ. ನೀರವ್ ಮೋದಿ ಒಡೆತನದ 16 ಕಂಪೆನಿಗಳಲ್ಲಿ ಒಂದರ ನಿರ್ದೇಶಕರಾಗಿರುವ ಹಾಗೂ ಸದ್ಯ ಬಂಧನದಲ್ಲಿರುವ ಹೇಮಂತ್ ಭಟ್ ವಿಚಾರಣೆಯ ವೇಳೆ ತಮ್ಮ ವಕೀಲರು ಕೂಡ ಹಾಜರಿರಲು  ಅನುಮತಿಸಬೇಕೆಂದು ಕೋರಿ ಸಲ್ಲಿಸಿರುವ ಅಪೀಲು ಇಂದು ವಿಚಾರಣೆಗೆ ಬರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News