ಪ.ಬಂಗಾಳ: ಆರೆಸ್ಸೆಸ್ ಬೆಂಬಲಿತ ಶಾಲೆಗಳನ್ನು ಮುಚ್ಚಲು ಮುಂದಾದ ಮಮತಾ ಸರಕಾರ

Update: 2018-02-21 09:01 GMT

ಕೊಲ್ಕತ್ತಾ, ಫೆ.21: ಪಶ್ಚಿಮ ಬಂಗಾಳದಲ್ಲಿರುವ ಆರೆಸ್ಸೆಸ್ ಬೆಂಬಲಿತ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲು ಮಮತಾ ಬ್ಯಾನರ್ಜಿ ಸರಕಾರ ಮುಂದಾಗಿದೆ ಎಂದು ರಾಜ್ಯದ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಹೇಳಿದ್ದಾರೆ.

"ರಾಜ್ಯದಲ್ಲಿ ಆರೆಸ್ಸೆಸ್ ಬೆಂಬಲಿತ 493 ಶಾಲೆಗಳಿವೆಯೆಂಬ ಮಾಹಿತಿ ಸರಕಾರಕ್ಕೆ ದೊರೆತಿದೆ. ಇವುಗಳಲ್ಲಿ 125 ಶಾಲೆಗಳು ಸರಕಾರದಿಂದ ನಿರಾಕ್ಷೇಪಣಾ ಪತ್ರವನ್ನು ಪಡೆಯದೆ ಕಾರ್ಯಾಚರಿಸುತ್ತಿವೆ. ಇಂತಹ ಶಾಲೆಗಳು ಇನ್ನು ಮುಂದೆ ಕಾರ್ಯಾಚರಿಸಲು ಸಾಧ್ಯವಿಲ್ಲ ಎಂದು ಅವುಗಳಿಗೆ ತಿಳಿಸಲಾಗಿದೆ. ಉಳಿದ ಶಾಲೆಗಳ ದಾಖಲೆಗಳನ್ನೂ ಪರಿಶೀಲಿಸಲಾಗುತ್ತಿದೆ'' ಎಂದು ಸಚಿವರು ತಿಳಿಸಿದ್ದಾರೆ.

"ಶಾಲೆಗಳು ಆರೆಸ್ಸೆಸ್ ಬೆಂಬಲಿತವಾಗಿರಲಿ ಅಥವಾ ಇಲ್ಲದೇ ಇರಲಿ, ನಿಯಮಗಳನ್ನು ಪಾಲಿಸಲೇ ಬೇಕು.  ಲಾಠಿ ಬೀಸುವುದು ಹೇಗೆ ಎಂದು ಕಲಿಸುವುದು ಸಾಧ್ಯವಿಲ್ಲ. ನಮ್ಮ ಗಮನಕ್ಕೆ ತರಲಾದ ಪ್ರತಿಯೊಂದು ಪ್ರಕರಣವನ್ನೂ ನಾವು ಪರಿಶೀಲಿಸುತ್ತಿದ್ದೇವೆ. ಹೆಚ್ಚಿನ ಶಾಲೆಗಳು ಉತ್ತರ ಬಂಗಾಳದಲ್ಲಿದೆ ಹಾಗೂ ಈ ಹಿಂದೆ ಅಧಿಕಾರದಲ್ಲಿದ್ದ ಎಡಪಕ್ಷ ಸರಕಾರದಿಂದ ಅನುಮತಿ ಪಡೆದಿದ್ದವು,'' ಎಂದು ವಿಧಾನಸಭೆಯ ಹೊರಗೆ ಪತ್ರಕರ್ತರೊಡನೆ ಮಾತನಾಡುತ್ತಾ ಅವರು ಹೇಳಿದರು.

ಸರಕಾರದ ನಿರ್ಧಾರ ಆರೆಸ್ಸೆಸ್ ಆಕ್ರೋಶಕ್ಕೆ ಕಾರಣವಾಗಿದೆ. "ನಮ್ಮ ಸಂಘಟನೆ ನಡೆಸುವ ಶಾಲೆಗಳನ್ನು ಮುಚ್ಚುವ ಬದಲು ಸಚಿವರು ತಮ್ಮ ಕ್ಷೇತ್ರದ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಬೇಕು'' ಎಂದು ದಕ್ಷಿಣ ಬಂಗಾಳ ಆರೆಸ್ಸೆಸ್ ಘಟಕದ ಕಾರ್ಯದರ್ಶಿ ಜಿಷ್ಣು ಬಸು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

"ಸರಕಾರ ಮುಚ್ಚಲು ಯತ್ನಿಸುತ್ತಿರುವ ಶಾಲೆಗಳು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಉತ್ತಮ ವಾತಾವರಣದಲ್ಲಿ ಒದಗಿಸುತ್ತಿವೆ. ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವತ್ತ ಗಮನ ನೀಡಬೇಕು'' ಎಂದು ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News